MOODUBIDIRE
Bidire News

2026-10-30

2026-10-30

2026-10-15

ತುಳು ಮಾನಾದಿಗೆದ ಮಿನದನ: ಡಾ. ಮೋಹನ ಆಳ್ವರಿಗೆ ತುಳುಕೂಟ ಬೆದ್ರದಿಂದ ಸನ್ಮಾನ

ಮೂಡುಬಿದಿರೆ: ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ತುಳುಕೂಟ ಬೆದ್ರ ವತಿಯಿಂದ ಭಾನುವಾರ ಕಲ್ಪವೃಕ್ಷ ಸಭಾಂಗಣದಲ್ಲಿ ‘ತುಳು ತುಳು ಮಾನಾದಿಗೆದ ಮಿನದನ’ ಕಾರ್ಯಕ್ರಮ ನಡೆಯಿತು. 
ತುಳು ಭಾಷೆಗೆ ಅಧಿಕೃತ ಮಾನ್ಯತೆ ದೊರಕಲು ಅಧ್ಯಯನ ವರದಿ ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಎಂ. ಮೋಹನ ಆಳ್ವ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ತಮ್ಮ ಅಧಿಕಾರಾವಧಿಯಲ್ಲಿ ತುಳು ಅಕಾಡೆಮಿಯನ್ನು ಸ್ಥಾಪಿಸಿ, ಭಾಷೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಈವರೆಗೆ ತುಳು ಅಕಾಡೆಮಿಯ 16 ಅಧ್ಯಕ್ಷರು ಭಾಷೆಯ ಅಭಿವೃದ್ಧಿಗೆ ತಮ್ಮದೇ ಆದ ರೀತಿಯಲ್ಲಿ ಶ್ರಮಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿಯೂ ತುಳು ಭಾಷೆಗೆ ಮಾನ್ಯತೆ ಇದೆ ಎಂದು ತಿಳಿಸಿದರು.

ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆಯ ಸ್ಥಾನಮಾನ ಹಾಗೂ ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸ್ಥಾನ ದೊರೆಯಬೇಕು ಎಂಬುದು ಎಲ್ಲರ ಆಶಯವಾಗಿದೆ. ಈ ನಿಟ್ಟಿನಲ್ಲಿ ಹಿಂದೆ ಸಮಿತಿಯನ್ನು ರಚಿಸಿ ವರದಿ ಸಿದ್ಧಪಡಿಸುವ ಪ್ರಯತ್ನವೂ ನಡೆದಿತ್ತು ಎಂದು ಹೇಳಿದರು.

ತುಳು ಭಾಷೆಯ ಆಡಳಿತಾತ್ಮಕ ಮಾನ್ಯತೆಯಿಂದ ತುಳುವರು ಮಾತ್ರವಲ್ಲದೆ ಬ್ಯಾರಿ, ಒಕ್ಕಲಿಗ ಸೇರಿದಂತೆ ವಿವಿಧ ಸಮುದಾಯಗಳ ಜನರೂ ಸಂತಸ ವ್ಯಕ್ತಪಡಿಸುತ್ತಾರೆ. ತುಳು ಭಾಷೆ ವಿಭಿನ್ನ ಸಮುದಾಯಗಳ ನಡುವೆ ಪ್ರೀತಿ, ಸೌಹಾರ್ದ ಮತ್ತು ಸಂಬಂಧಗಳನ್ನು ಬೆಸೆಯುವ ಶಕ್ತಿಯನ್ನು ಹೊಂದಿದೆ. ಇಂತಹ ಭಾಷೆಯ ಬೆಳವಣಿಗೆಗೆ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಡಾ. ಮೋಹನ ಆಳ್ವ ಕರೆ ನೀಡಿದರು.

ಅಖಿಲ ಭಾರತ ತುಳು ಒಕ್ಕೂಟ ಕುಡ್ಲದ ಅಧ್ಯಕ್ಷ ಎ.ಸಿ. ಭಂಡಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತುಳು ನಾಡು-ನುಡಿಗಾಗಿ ಹಲವಾರು ಹಿರಿಯರು ಶ್ರಮಿಸಿದ್ದಾರೆ. ತುಳು ಭಾಷೆಗೆ ರಾಜ್ಯದ ಮಾನ್ಯತೆ ದೊರೆತ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದು ಮುಖ್ಯ ಎಂದರು.
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಡಾ. ಮೋಹನ ಆಳ್ವ ಅವರು ತುಳು ಭಾಷೆಗೆ ನೀಡಿರುವ ಕೊಡುಗೆ ಅಪಾರ. ತುಳುಕೂಟ ಬೆದ್ರ ಅವರನ್ನು ಸನ್ಮಾನಿಸುತ್ತಿರುವುದು ಹಾಗೂ ಇಂತಹ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ನಮ್ಮ ಭಾಗ್ಯ ಎಂದು ಎ.ಸಿ. ಭಂಡಾರಿ ಹೇಳಿದರು.

ತುಳುಕೂಟ ಬೆದ್ರದ ಅಧ್ಯಕ್ಷೆ ಜಯಂತಿ ಎಸ್. ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಸಂಪತ್ ಸಾಮ್ರಾಜ್ಯ ಹಾಗೂ ತುಳುಕೂಟದ ಸ್ಥಾಪಕ ಅಧ್ಯಕ್ಷ ಚಂದ್ರಹಾಸ ದೇವಾಡಿಗ ಭಾಗವಹಿಸಿದ್ದರು.

ತುಳುಕೂಟಕ್ಕೆ ಧ್ವನಿವರ್ಧಕವನ್ನು ಕೊಡುಗೆಯಾಗಿ ನೀಡಿದ ಸುಮನಾ ಚಂದ್ರಹಾಸ ದೇವಾಡಿಗ ಅವರನ್ನು ಅಭಿನಂದಿಸಲಾಯಿತು. ತುಳುಕೂಟದ ಗೌರವ ಅಧ್ಯಕ್ಷ ಬಾಹುಬಲಿ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ಚೇತನಾ ರಾಜೇಂದ್ರ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಶ್ವೇತಾ ಜೈನ್ ಸನ್ಮಾನಪತ್ರ ವಾಚಿಸಿದರು.