ಮೂಡುಬಿದಿರೆ: ಇಲ್ಲಿನ 'ನೃತ್ಯ ವೃಕ್ಷ ಸ್ಕೂಲ್ ಆಫ್ ಡ್ಯಾನ್ಸ್' ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವ ಸಂಭ್ರಮ 'ವೃಕ್ಷ ಪಲ್ಲವ' ಶನಿವಾರದಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಜರುಗಿತು.
ಮಂಗಳೂರಿನ ಭರತಾಂಜಲಿ ಸಂಸ್ಥೆಯ ನೃತ್ಯ ಗುರುಗಳಾದ ವಿದುಷಿ ಪ್ರತಿಮಾ ಶ್ರೀಧರ್ ಮತ್ತು ಗುರು ಶ್ರೀಧರ ಹೊಳ್ಳ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಆಶೀರ್ವಚನ ನೀಡಿದ ಮೂಡುಬಿದಿರೆ ಜೈನ್ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿಗಳು, "ನೃತ್ಯ ಮತ್ತು ಸಂಗೀತವು ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ನೃತ್ಯದಂತಹ ಲಲಿತಕಲೆಗಳು ಪೂರಕವಾಗಿವೆ. ಶಿಕ್ಷಣದ ಜೊತೆಗೆ ಕಲೆಗಳು ಮಿಳಿತಗೊಂಡಾಗ ಮಾತ್ರ ಆ ಶಿಕ್ಷಣವು ಅರ್ಥಪೂರ್ಣವಾಗುತ್ತದೆ," ಎಂದು ನುಡಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಸಮೂಹದ ಕಾರ್ಯದರ್ಶಿ ರಶ್ಮಿತಾ ಜೈನ್, ಟಾಪ್ ಎಂಟರ್ಟೈನರ್ ಸಂಸ್ಥೆಯ ರೂಪೇಶ್ ಕುಮಾರ್, ನೃತ್ಯ ವೃಕ್ಷ ಸಂಸ್ಥೆಯ ನಿರ್ದೇಶಕಿ ಪ್ರಕ್ಷಿಲಾ ಜೈನ್, ಪುರಸಭೆ ಮಾಜಿ ಅಧ್ಯಕ್ಷೆ ಜಯಶ್ರೀ ಕೇಶವ್ ಉಪಸ್ಥಿತರಿದ್ದರು.
ಪ್ರತಿಮಾ ಶ್ರೀಧರ್- ಗುರು ಶ್ರೀಧರ ಹೊಳ್ಳ ದಂಪತಿಯನ್ನು ಸಂಸ್ಥೆಯಿಂದ ಗೌರವಿಸಲಾಯಿತು. ಸಂಸ್ಥೆಯ ನಿರ್ದೇಶಕಿ ಪ್ರಕ್ಷಿಲಾ ಜೈನ್ ಅವರನ್ನು ಸಂಸ್ಥೆಯ ವಿದ್ಯಾರ್ಥಿಗಳ ಪೋಷಕರು ಗೌರವಿಸಿದರು.
ಪ್ರೊ. ನಿರಂಜನ್, ಶೀತಲ್ ಕುಮಾರ್ ಹಾಗೂ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಂಡವು.


