ಮೂಡುಬಿದಿರೆ: ಇಲ್ಲಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ಯುವತಿಯೋರ್ವಳು ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಕರುಣಾಜನಕ ಘಟನೆ ನಡೆದಿದೆ.
ಘಟನೆಯ ವಿವರ:
ಮೂಡುಬಿದಿರೆ ಗಾಂಧಿನಗರ ಸಮೀಪದ ಕಡೆಪಲ್ಲ ನಿವಾಸಿ ನವ್ಯ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಮೂಡುಬಿದಿರೆಯ ಅಲಂಕಾರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರದಂದು ನವ್ಯ ತನ್ನ ನಿಡ್ಡೋಡಿ ಮೂಲದ ಸ್ನೇಹಿತೆಯ ಜೊತೆಗೆ ಗುರುಪುರ ನದಿ ತೀರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ನವ್ಯ ದಿಢೀರನೆ ನದಿಗೆ ಹಾರಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ಸ್ನೇಹಿತೆ, ನವ್ಯರನ್ನು ರಕ್ಷಿಸಲು ಕೈ ಹಿಡಿದು ಎಳೆಯಲು ಪ್ರಯತ್ನಪಟ್ಟಿದ್ದಾರೆ. ಆದರೆ ಯತ್ನ ವಿಫಲವಾಗಿದ್ದು, ಈ ವೇಳೆ ಸ್ನೇಹಿತೆಯ ಕೈಗೆ ತೀವ್ರವಾದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಮಿಥುನ್ ರೈ ಅವರಿಂದ ತುರ್ತು ಸ್ಪಂದನೆ:
ಘಟನೆ ನಡೆದ ವೇಳೆ ಆ ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಅವರು ತಕ್ಷಣ ಸ್ಪಂದಿಸಿದರು. ಕೂಡಲೇ ಸ್ಥಳೀಯರ ನೆರವಿನೊಂದಿಗೆ ನದಿಯಿಂದ ಶವವನ್ನು ಮೇಲಕ್ಕೆತ್ತಲು ಅಗತ್ಯವಿರುವ ತುರ್ತು ವ್ಯವಸ್ಥೆಗಳನ್ನು ಮಾಡಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
