MOODUBIDIRE
Bidire News

2026-10-30

2026-10-30

2026-10-15

ಆಳ್ವಾಸ್ ಕಾಲೇಜಿನಲ್ಲಿ ಯುಜಿಸಿ-ನೆಟ್, ಕೆ-ಸೆಟ್ ಪರೀಕ್ಷೆ ಮಾರ್ಗದರ್ಶನ

ಮೂಡುಬಿದಿರೆ: ಆಳ್ವಾಸ್ ಸ್ವಾಯತ್ತ ಕಾಲೇಜಿನ ಇಂಗ್ಲಿಷ್ ವಿಭಾಗದ ವತಿಯಿಂದ ಯುಜಿಸಿ-ನೆಟ್, ಕೆ-ಸೆಟ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ, ಸಿದ್ಧತೆ ಮತ್ತು ಯಶಸ್ಸಿನ ಕಾರ್ಯತಂತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಾಗಾರ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಎಸ್.ಡಿ.ಎಂ. ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಮನು ಎ.ಆರ್. ಮಾತನಾಡಿ, ಉತ್ತಮ ಅಂಕ ಗಳಿಸಲು ಪ್ರತಿದಿನ ಅಧ್ಯಯನಕ್ಕೆ ನಿರ್ದಿಷ್ಟ ಸಮಯ ಮೀಸಲಿಡುವುದು, ಅಣಕು ಪರೀಕ್ಷೆಗಳನ್ನು ಬರೆಯುವುದು ಹಾಗೂ ಪ್ರಶ್ನೆಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದರು. ಸುಲಭವಾಗಿ ಅಂಕ ಗಳಿಸಬಹುದಾದ ಪ್ರಶ್ನೆಗಳನ್ನು ಗುರುತಿಸಿ, ಸಮಯವನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಸಾಧನೆಯನ್ನು ಸುಧಾರಿಸಬಹುದು ಎಂದು ತಿಳಿಸಿದರು.
ಯುಜಿಸಿ-ನೆಟ್ ಮತ್ತು ಕೆ-ಸೆಟ್ ಪರೀಕ್ಷೆಗಳಲ್ಲಿನ ಬೋಧನಾ ಸಾಮರ್ಥ್ಯ, ಸಂಶೋಧನಾ ಸಾಮರ್ಥ್ಯ, ತಾರ್ಕಿಕ ಚಿಂತನೆ, ದತ್ತಾಂಶ ವ್ಯಾಖ್ಯಾನ, ಉನ್ನತ ಶಿಕ್ಷಣ ವ್ಯವಸ್ಥೆ ಹಾಗೂ ಪರಿಸರ ಸಂಬಂಧಿತ ಪ್ರಶ್ನೆಗಳನ್ನು ಅರ್ಥೈಸಿ ಉತ್ತರಿಸುವ ಕುರಿತು ಮಾರ್ಗದರ್ಶನ ನೀಡಿದರು. ಕ್ಲಿಷ್ಟಕರ ಪ್ರಶ್ನೆಗಳನ್ನು ಶಾಂತಚಿತ್ತದಿಂದ ಎದುರಿಸಿ, ತಪ್ಪು ಆಯ್ಕೆಗಳನ್ನು ಗುರುತಿಸಿ ಸರಿಯಾದ ಉತ್ತರವನ್ನು ಆಯ್ಕೆಮಾಡುವ ಕೌಶಲ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ನಿರಂತರ ಅಧ್ಯಯನ, ಪ್ರಚಲಿತ ವಿದ್ಯಮಾನಗಳ ಅರಿವು, ಪರಿಕಲ್ಪನೆಗಳ ಸ್ಪಷ್ಟತೆ ಮತ್ತು ಆತ್ಮವಿಶ್ವಾಸ ಯಶಸ್ಸಿಗೆ ಸಹಕಾರಿಯಾಗುತ್ತವೆ. ಈ ಪರೀಕ್ಷೆಗಳು ಅರ್ಹತೆ ಗಳಿಸುವುದರ ಜೊತೆಗೆ ಸಂಶೋಧನಾ ಮನೋಭಾವ ಮತ್ತು ಶೈಕ್ಷಣಿಕ ಪ್ರಗತಿಗೂ ನೆರವಾಗುತ್ತವೆ ಎಂದು ಮನು ಎ.ಆರ್. ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥ ಡಾ. ಟಿ.ಕೆ. ರವೀಂದ್ರನ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಥ್ವಿ ಸ್ವಾಗತಿಸಿದರು. ಭವ್ಯಾ ಕಾರ್ಯಕ್ರಮ ನಿರೂಪಿಸಿದರು. ಕ್ಷಮಾ ವಂದಿಸಿದರು.