MOODUBIDIRE
Bidire News

2026-10-30

2026-10-30

2026-10-15

ಮೂಡುಬಿದಿರೆ: ಡೆಂಗ್ಯೂ, ಮಲೇರಿಯಾ ತಡೆಗೆ ತಿಂಗಳಲ್ಲಿ ಎರಡು ಬಾರಿ ಲಾರ್ವಾ ವಿಶೇಷ ಸಮೀಕ್ಷೆ

ಮೂಡುಬಿದಿರೆ: ಸೊಳ್ಳೆಗಳಿಂದ ಹರಡುವ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶುಕ್ರವಾರ ವಿಶೇಷ ಲಾರ್ವಾ ಸಮೀಕ್ಷೆ ನಡೆಸುತ್ತಿದ್ದಾರೆ.

ಈ ಕುರಿತು ಬಿದಿರೆ ನ್ಯೂಸ್ ವೆಬ್ ತಾಣಕ್ಕೆ ಮಾಹಿತಿ ನೀಡಿದ ಮೂಡುಬಿದಿರೆ ಸಮುದಾಯ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಕ್ಷತಾ, ನಗರ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಇಲ್ಲದಿರುವುದು ಹಾಗೂ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಎಲ್ಲ ಪ್ರದೇಶಗಳನ್ನು ನಿಯಮಿತವಾಗಿ ಸಂಪೂರ್ಣವಾಗಿ ಪರಿಶೀಲಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಈ ವಿಶೇಷ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಕ್ಷೇತ್ರ ಸಿಬ್ಬಂದಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಾರೆ.

ಲಾರ್ವಾ ಸಮೀಕ್ಷೆ ಆರೋಗ್ಯ ಇಲಾಖೆಯ ಕಾರ್ಯದ ಅವಿಭಾಜ್ಯ ಅಂಗವಾಗಿದ್ದು, ಇದರೊಂದಿಗೆ ವಿಶೇಷವಾಗಿ ಮನೆಗಳ ಸುತ್ತಮುತ್ತ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುವ ನೀರು ನಿಂತಿರುವ ಸ್ಥಳಗಳು ಮತ್ತು ಪಾತ್ರೆಗಳನ್ನು ಪರಿಶೀಲಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

ಮಳೆ ಬಂದು ನಿಲ್ಲುವ ಸಂದರ್ಭಗಳಲ್ಲಿ ಸೊಳ್ಳೆಗಳ ಉತ್ಪತ್ತಿಗೆ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತ ನೀರು ನಿಂತಿರುವ ಪಾತ್ರೆಗಳು ಹಾಗೂ ಇತರ ವಸ್ತುಗಳನ್ನು ಖಾಲಿ ಮಾಡಿ, ಸೊಳ್ಳೆಗಳು ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಡೆಂಗ್ಯೂ ಮತ್ತು ಮಲೇರಿಯಾದಂತಹ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಎಚ್ಚರಿಕೆ ವಹಿಸಿ, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಲಾಗುತ್ತಿದೆ.

ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಪರಿಶೀಲಿಸಿ ನೀರು ನಿಲ್ಲದಂತೆ ನೋಡಿಕೊಂಡರೆ ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಲು ಮತ್ತು ಸೊಳ್ಳೆಗಳಿಂದ ಹರಡುವ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.