MOODUBIDIRE
Bidire News

2026-10-30

2026-10-30

2026-10-15

ನಿಡ್ಡೋಡಿಯಲ್ಲಿ ಫಲವತ್ತಾದ ಭತ್ತದ ಬೆಳೆ ನಾಶ: ಜೀವಕ್ಕೆ ಹಾನಿಯಾದರೆ ಸ್ಟೆರ್ ಲೈಟ್ ಕಂಪೆನಿಯೇ ಹೊಣೆ- ಸಂತ್ರಸ್ತ ಎಚ್ಚರಿಕೆ

ಮೂಡುಬಿದಿರೆ: ತೆನೆ ಬಿಡುವ ಹಂತದಲ್ಲಿದ್ದ ಫಲವತ್ತಾದ ಭತ್ತದ ಬೆಳೆ ನಾಶಪಡಿಸಲಾಗಿದೆ. ನಾನು ಅನಾರೋಗ್ಯದಿಂದ ನಾನು ಬಳಲುತ್ತಿದ್ದು, ಜೀವಕ್ಕೆ ಏನಾದರೂ ಆದಲ್ಲಿ ಅದಕ್ಕೆ ಸ್ಟೆರ್ ಲೈಟ್ ಕಂಪೆನಿಯೇ ನೇರ ಹೊಣೆ ಎಂದು ರೈತ ಸಂಘದ ಕಾರ್ಯಕರ್ತ ಅಲ್ಫೋನ್ಸ್ ಡಿಸೋಜ ಅವರು ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಭಾರತೀಯ ಕಿಸಾನ್ ಸಂಘದ ಕಾರ್ಯಕರ್ತರಾಗಿರುವ ಅವರು, ಶನಿವಾರ ಮನೆಗೆ ಗೈರುಹಾಜರಿದ್ದ ವೇಳೆ ಕಂಪನಿ ಸಿಬ್ಬಂದಿ ಪೊಲೀಸ್ ಭದ್ರತೆಯೊಂದಿಗೆ ತಮ್ಮ ಗದ್ದೆಗೆ ಪ್ರವೇಶಿಸಿ ಮರಗಳನ್ನು ಕಡಿದು, ಭತ್ತದ ಬೆಳೆ ಹಾನಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. “ಬೆಳೆ ಕಟಾವು ಮಾಡಲು ಒಂದು ತಿಂಗಳ ಕಾಲಾವಕಾಶ ನೀಡಿರಿ” ಎಂದು ಮನವಿ ಮಾಡಿದರೂ ಸಹ ಕೇಳಿಸಿಕೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಕೆಲಸ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸೂಚಿಸಿದ್ದರೂ, ತಮ್ಮ ಗೈರುಹಾಜರಿಯಲ್ಲಿ ಮತ್ತೆ ಕೆಲಸ ಆರಂಭಿಸಲಾಗಿದೆ ಎಂದು ದೂರಿದ್ದಾರೆ. ಯಾವುದೇ ಮುಂಚಿತ ನೋಟಿಸ್ ನೀಡದೇ, ಪರಿಹಾರ ಮೊತ್ತದ ಬಗ್ಗೆ ಮಾತುಕತೆ ನಡೆಸದೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

“ನನಗೆ ಸಮರ್ಪಕ ಪರಿಹಾರ ನೀಡಿದರೆ ಯಾವುದೇ ತಕರಾರು ಮಾಡುವುದಿಲ್ಲ” ಎಂದು ತಿಳಿಸಿದ್ದರೂ, ಕಂಪನಿ ಅಧಿಕಾರಿಗಳು ‘ಕೆಲಸ ನಿಲ್ಲಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ಗದ್ದೆಯಿಂದ ಮುಂದಿನ ಭಾಗದಲ್ಲಿ ಟವರ್ ನಿರ್ಮಾಣ ಕಾರ್ಯ ಬಾಕಿಯಿದ್ದು, ಬೆಳೆ ಕಟಾವು ಮುಗಿಯುವ ತನಕ ಸಮಯ ನೀಡಬೇಕೆಂದು ಪುನಃ ಮನವಿ ಮಾಡಿದ್ದಾರೆ.

ಈ ಕುರಿತು ಕಮಿಷನರ್ ಸುಧೀರ್ ರೆಡ್ಡಿ ಅವರಿಗೆ ಮಾಹಿತಿ ನೀಡಲಾಗಿದೆ. ಎಂದು ತಿಳಿಸಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಅವರು ಆಗ್ರಹಿಸಿದ್ದಾರೆ.