MOODUBIDIRE
Bidire News

ಪಡುಕೊಣಾಜೆ ಶಾಲಾ ಕಟ್ಟಡದ ನೆರವಿಗಾಗಿ ‘ಊರು ಬೋಡು, ಪುದರ್ ಬೊರ್ಚಿ’ ನಾಟಕ ಪ್ರದರ್ಶನ: ಶಿಕ್ಷಣ ಸಂಸ್ಥೆಯ ಬಲವರ್ಧನೆಗೆ ಶ್ರಮಿಸುತ್ತಿರುವ ಊರವರು, ಹಳೆ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ-ಸುದರ್ಶನ್ ಎಂ.

ಮೂಡುಬಿದಿರೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡುಕೊಣಾಜೆಯ ಶತಮಾನೋತ್ಸವದ ಅಂಗವಾಗಿ ಶಾಲಾ ಕಟ್ಟಡದ ಸಹಾಯಾರ್ಥ ಮೂಡುಬಿದಿರೆಯ ಕನ್ನಡ ಭವನದಲ್ಲಿ ಅಕ್ಟೋಬರ್ 24ರಂದು ಚೈತನ್ಯ ಕಲಾವಿದರು ಬೈಲೂರು ತಂಡದ ಪ್ರಸಕ್ತ ವರ್ಷದ ನೂತನ ಹಾಸ್ಯಮಯ ತುಳು ನಾಟಕ ‘ಊರು ಬೋಡು, ಪುದರ್ ಬೊರ್ಚಿ’ ಪ್ರದರ್ಶನಗೊಂಡಿತು.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಅಧ್ಯಕ್ಷ ಸುದರ್ಶನ್ ಎಂ. ದೀಪ ಬೆಳಗಿಸಿ ನಾಟಕ ಪ್ರದರ್ಶನದ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಊರವರು ಮತ್ತು ಹಳೆ ವಿದ್ಯಾರ್ಥಿಗಳು ಸಂಘಟಿತರಾಗಿ ಶಿಕ್ಷಣ ಸಂಸ್ಥೆಯ ಬಲವರ್ಧನೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ಯುವ ಸಮುದಾಯ ಒಗ್ಗೂಡಿದಾಗ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಕ್ರಾಂತಿ ತರಲು ಸಾಧ್ಯವಿದೆ ಎಂದು ಹೇಳಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗೂ ಪಂಚಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ರಂಜಿತ್ ಪೂಜಾರಿ ತೋಡಾರ್ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಈಗಾಗಲೇ ಎರಡು ಕೊಠಡಿಗಳನ್ನು ಒದಗಿಸಲಾಗಿದ್ದು, ಹೆಚ್ಚುವರಿ ಕೊಠಡಿ ಹಾಗೂ ಇತರ ವ್ಯವಸ್ಥೆಗಳನ್ನು ಕಲ್ಪಿಸಲು ಯೋಜನೆ ರೂಪಿಸುವುದಾಗಿ ತಿಳಿಸಿದರು.
ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ ಹಾಗೂ ನಾಟಕದ ಕರ್ತೃ ಪ್ರಸನ್ನ ಶೆಟ್ಟಿ ಬೈಲೂರು ಶುಭ ಹಾರೈಸಿದರು.
ಪಡುಕೊಣಾಜೆ ಮಾಣಿಕ್ಯ ರಾಜ್ ಆಳ್ವ, ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರವೀಣ್ ಕುಮಾರ್, ವಕೀಲರಾದ ನಾಗೇಶ್ ಶೆಟ್ಟಿ ಮತ್ತು ಸುರೇಶ್ ಕೆ. ಪೂಜಾರಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಸನಿಲ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ, ಉದ್ಯಮಿ ವಿಶ್ವನಾಥ ಕೋಟ್ಯಾನ್ ಹನ್ನೇರ್, ಆರ್.ಆರ್. ಫ್ಯಾಷನ್ ಮಾಲಕ ರಾಜೇಶ್ ಎಂ. ಕೋಟ್ಯಾನ್ ಹೌದಾಲ್, ಪಂಚರತ್ನ ಹೋಟೆಲ್ ಉದ್ಯಮಿ ವಿನಯ ಶೆಟ್ಟಿ ಪಡುಕೊಣಾಜೆ, ಮೂಡುಬಿದಿರೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಸಾಲ್ಯಾನ್, ಜೋಗುಳ ಬೆಟ್ಟು ನಿತೇಶ್ ಹೆಗ್ಡೆ ಹಾಗೂ ಶಿರ್ತಾಡಿ ಶ್ರೀ ಕ್ಷೇತ್ರ ಕಂದಿರು ದೇವಸ್ಥಾನದ ಆಡಳಿತ ಮುಖ್ಯಸ್ಥ ಸೋಮನಾಥ ಶಾಂತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನಾಟಕ ವೀಕ್ಷಿಸಿ ಶುಭ ಹಾರೈಸಿದರು. ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಎಂ.ಆರ್.ಪಿ.ಎಲ್. ನಿಧಿಯಿಂದ ಎರಡು ಕೊಠಡಿಗಳನ್ನು ಮಂಜೂರು ಮಾಡಿರುವುದನ್ನು ಸಭೆಗೆ ತಿಳಿಸಲಾಯಿತು. ಅಲ್ಲದೆ, ಮತ್ತೆರಡು ಕೊಠಡಿಗಳ ಮಂಜೂರಾತಿಗೆ ಭರವಸೆ ನೀಡಿರುವುದನ್ನೂ ತಿಳಿಸಲಾಯಿತು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ಚಂದ್ರ ಕೆ.ಸಿ., ಎಸ್‌ಡಿಎಂಸಿ ಅಧ್ಯಕ್ಷ ಸುಧಾಕರ ಹೆಗ್ಡೆ, ಹಿತೈಷಿ ರಾಘವ ಪಿ. ಸುವರ್ಣ ಕೊಪ್ಪದೊಟ್ಟು ಹಾಗೂ ಶಾಲಾ ಮುಖ್ಯ ಶಿಕ್ಷಕಿ ಶ್ರೀವಿದ್ಯಾ ಡಿ. ಉಪಸ್ಥಿತರಿದ್ದರು. ಶಾಲೆಯ ವಿವಿಧ ಸಮಿತಿಗಳ ಪದಾಧಿಕಾರಿಗಳು ನಾಟಕ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ರಾಮ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.