MOODUBIDIRE
Bidire News

ಆಳ್ವಾಸ್ ಕಾಲೇಜಿನಲ್ಲಿ ‘ಅಭಿವ್ಯಕ್ತಿ’ ವಿದ್ಯಾರ್ಥಿ ವೇದಿಕೆಗೆ ಚಾಲನೆ: ನಿರೂಪಣೆಯಲ್ಲಿ ಜ್ಞಾನ, ಸಿದ್ಧತೆ, ಆತ್ಮವಿಶ್ವಾಸ, ಸ್ವಂತ ಶೈಲಿ ಮುಖ್ಯ-ನಿತೇಶ್ ಪೂಜಾರಿ ಮಾರ್ನಾಡ್

ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ವೇದಿಕೆ ‘ಅಭಿವ್ಯಕ್ತಿ’ಯ 2026–27ನೇ ಸಾಲಿನ ಚಟುವಟಿಕೆಗಳಿಗೆ ಶುಕ್ರವಾರ ಕಾಲೇಜಿನ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ಚಾಲನೆ ನೀಡಲಾಯಿತು.
ನಿರೂಪಕ ನಿತೇಶ್ ಪೂಜಾರಿ ಮಾರ್ನಾಡ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಿರೂಪಣೆಗೆ ಜ್ಞಾನ, ಆತ್ಮವಿಶ್ವಾಸ, ಪೂರ್ವಸಿದ್ಧತೆ, ವಿಷಯದ ಮೇಲಿನ ಆಸಕ್ತಿ, ಧ್ವನಿಯ ಏರಿಳಿತ ಮತ್ತು ಬದ್ಧತೆ ಅಗತ್ಯ ಎಂದರು.

ಪ್ರತಿಯೊಂದು ಕಾರ್ಯಕ್ರಮದ ಸ್ವರೂಪಕ್ಕೆ ಅನುಗುಣವಾಗಿ ಸಿದ್ಧತೆ ಮಾಡಿಕೊಳ್ಳಬೇಕು. ಕಾರ್ಯಕ್ರಮದ ಹಿನ್ನೆಲೆ ಮತ್ತು ಸಂದರ್ಭವನ್ನು ತಿಳಿದುಕೊಂಡು, ಸ್ಕ್ರಿಪ್ಟ್‌ನ ಆಶಯವನ್ನು ಅರ್ಥಮಾಡಿಕೊಂಡು ಸಹಜವಾಗಿ ನಿರೂಪಿಸಬೇಕು. ಧ್ವನಿಯ ಏರಿಳಿತ ಮತ್ತು ಮಾತಿನ ಶೈಲಿ ಕಾರ್ಯಕ್ರಮಕ್ಕೆ ಮೆರುಗು ನೀಡುತ್ತವೆ. ನಿರೂಪಕರು ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಮ್ಮ ನಿರೂಪಣಾ ವೃತ್ತಿಜೀವನಕ್ಕೆ ಆಳ್ವಾಸ್ ವಿರಾಸತ್ ವೇದಿಕೆಯಾಯಿತು ಎಂದು ಸ್ಮರಿಸಿದ ನಿತೇಶ್ ಪೂಜಾರಿ ಮಾರ್ನಾಡ್, ಇತರರನ್ನು ಗಮನಿಸಿ ಕಲಿಯುವುದರ ಜೊತೆಗೆ ಅನುಕರಣೆ ಮಾಡದೆ ಸ್ವಂತ ಶೈಲಿಯನ್ನು ರೂಪಿಸಿಕೊಳ್ಳಬೇಕು. ಸಣ್ಣ ಅವಕಾಶಗಳನ್ನೂ ಕಡೆಗಣಿಸದೆ ಬೆಳವಣಿಗೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಂಡಾಗ ಯಶಸ್ಸು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಮಾತನಾಡಿದರು.

‘ಅಭಿವ್ಯಕ್ತಿ’ಯ ಕಾರ್ಯದರ್ಶಿಯಾಗಿ ರವಿ ಕೊಪ್ಪಳ, ಉಪಕಾರ್ಯದರ್ಶಿಯಾಗಿ ಕಾವ್ಯ ಎನ್.ವಿ. ಹಾಗೂ ಖಜಾಂಚಿಯಾಗಿ ವಿಧಿಶಾ ಜವಾಬ್ದಾರಿ ವಹಿಸಿಕೊಂಡರು. ಪ್ರಚಾರ ವಿಭಾಗದ ಜವಾಬ್ದಾರಿಯನ್ನು ಸಾಮ್ಯುಲ್, ಅಲಕನಂದಾ, ಮಹೇಶ್ ಡಿ.ಎನ್. ಮತ್ತು ರೋಬಿನ್ ಬೆಳ್ಳಿಯಪ್ಪ ನಿರ್ವಹಿಸಲಿದ್ದಾರೆ.