MOODUBIDIRE
Bidire News

ಪಾಲಡ್ಕ ವಿದ್ಯುತ್ ದುರಂತ-ಶನಿವಾರ ಅಂತ್ಯಕ್ರಿಯೆ: ಮೃತರ ಮನೆಗೆ ಶಾಸಕ ಕೋಟ್ಯಾನ್ ಭೇಟಿ-ಕಾರಣ ಪತ್ತೆಗೆ ಸೂಚನೆ

ಮೂಡುಬಿದಿರೆ: ಪಾಲಡ್ಕ ಗ್ರಾಮದ ವರ್ಣಬೆಟ್ಟು ಪೊಸಲಾಯಿಯಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಮರ್ಸಿ ಮಸ್ಕರೇನ್ಹಸ್ ಮತ್ತು ಶೋನ್ ಮಸ್ಕರೇನ್ಹಸ್ ಅವರ ಮನೆಗೆ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ದುರಂತದ ವಿಷಯ ತಿಳಿದ ತಕ್ಷಣ ಮೆಸ್ಕಾಂ ಅಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿರುವುದಾಗಿ ಶಾಸಕ ಕೋಟ್ಯಾನ್ ತಿಳಿಸಿದರು. ಮನೆಯ ವಿದ್ಯುತ್ ಸಂಪರ್ಕ ವ್ಯವಸ್ಥೆ ಹಾಗೂ ವಿದ್ಯುತ್ ಪ್ರವಹಿಸಲು ಕಾರಣವೇನು ಎಂಬುದನ್ನು ಪತ್ತೆಹಚ್ಚಬೇಕು. ಇಂತಹ ಅವಘಡಗಳು ಮರುಕಳಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಪಾಲಡ್ಕ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ಮಾಜಿ ಸದಸ್ಯ ಶೆಡ್ಯ ಸುರೇಶ್ ಪೂಜಾರಿ, ಸ್ಥಳೀಯರಾದ ಜಯ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಶನಿವಾರ ಅಂತ್ಯಕ್ರಿಯೆ

ಮೃತರ ಹತ್ತಿರದ ಸಂಬಂಧಿ ಜೆರಿ ಮಸ್ಕರೇನ್ಹಸ್ ಶುಕ್ರವಾರ ವಿದೇಶದಿಂದ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ, ಅ. 24ರಂದು ಬೆಳಿಗ್ಗೆ 9 ಗಂಟೆಗೆ ಪಾಲಡ್ಕದ ಸೈಂಟ್ ಇಗ್ನೇಶಿಯಸ್ ಚರ್ಚ್‌ನಲ್ಲಿ ಮರ್ಸಿ ಮಸ್ಕರೇನ್ಹಸ್ ಮತ್ತು ಶೋನ್ ಮಸ್ಕರೇನ್ಹಸ್ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.