MOODUBIDIRE
Bidire News

ಎಸ್‌ಕೆಎಫ್ ಸಂಸ್ಥಾಪಕ ಡಾ. ರಾಮಕೃಷ್ಣ ಆಚಾರ್ ಅವರಿಗೆ ಬನ್ನಡ್ಕ ಶ್ರೀ ಶಾರದಾರತ್ನ ಪ್ರಶಸ್ತಿ ಪ್ರದಾನ

ಮೂಡುಬಿದಿರೆ:  ಬನ್ನಡ್ಕದಲ್ಲಿ ನಡೆದ 5ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದಲ್ಲಿ ಅಂತರರಾಷ್ಟ್ರೀಯ ಉದ್ಯಮಿ, ಎಸ್‌ಕೆಎಫ್ ಇಂಡಿಯಾ ಪ್ರೈವೇಟ್ ಲಿ. ಸಂಸ್ಥಾಪಕ ಡಾ. ಜಿ. ರಾಮಕೃಷ್ಣ ಆಚಾರ್ ಅವರಿಗೆ ಬನ್ನಡ್ಕ ಶ್ರೀ ಶಾರದಾರತ್ನ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬನ್ನಡ್ಕದಲ್ಲಿ ಉದ್ಯಮ ಆರಂಭಿಸಿದ ಬಳಿಕ ಗ್ರಾಮದ ಅಭಿವೃದ್ಧಿಗೆ ನೀಡಿದ ಕೊಡುಗೆಗಳನ್ನು ವಿವರಿಸಿದರು. ಕಂಪನಿಯ ಸಿಎಸ್‌ಆರ್ ನಿಧಿಯಿಂದ ಪ್ರತಿವರ್ಷ ಸುಮಾರು 25 ಲಕ್ಷ ರೂ. ಅಭಿವೃದ್ಧಿ ಕಾರ್ಯಗಳಿಗೆ ನೀಡಲು ಸಾಧ್ಯವಿದ್ದು, ಊರವರು ಸಮಿತಿ ರಚಿಸಿ ಮೊತ್ತವನ್ನು ಬಳಸಿಕೊಳ್ಳಬೇಕು ಎಂದರು. ಮುಂದಿನ ದಿನಗಳಲ್ಲಿ ಬನ್ನಡ್ಕದಲ್ಲಿ ಸಂಜೀವಿನಿ ಗೋಧಾಮ ಸ್ಥಾಪಿಸಿ, ಮೀನು, ಕುರಿ, ಕೋಳಿ, ಪಕ್ಷಿಗಳ ಸಾಕಣೆ, ಕಾಂಪೋಸ್ಟ್ ಗೊಬ್ಬರ ತಯಾರಿಕೆ ಹಾಗೂ ಸಾವಯವ ಕೃಷಿಗೆ ಉತ್ತೇಜನ ನೀಡುವ ಏಳು ಹಂತದ ಕೃಷಿ ಚಟುವಟಿಕೆಗಳನ್ನು ನಡೆಸುವುದಾಗಿ ತಿಳಿಸಿದರು.

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಧಾರ್ಮಿಕ ಕಾರ್ಯಗಳು ಗ್ರಾಮಾಭಿವೃದ್ಧಿಗೆ ಪ್ರೇರಕ ಎಂದರು. ಶಾಸಕ ಉಮಾನಾಥ ಎ. ಕೋಟ್ಯಾನ್ ದಸರಾ ಹಿಂದೂ ಸಮಾಜದ ಚೈತನ್ಯ ಎಂದರು. ಬಿಜೆಪಿ ಮುಖಂಡ ಸುದರ್ಶನ ಎಂ., ಉದ್ಯಮಿ ಶ್ರೀಪತಿ ಭಟ್ ಸಂಘಟನೆ ಮತ್ತು ಶಾರದೋತ್ಸವದ ಮಹತ್ವ ತಿಳಿಸಿದರು.

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ಕೃಷಿಕ ರಮೇಶ್ ಶೆಟ್ಟಿ, ನ್ಯಾಯವಾದಿ ಚೇತನ್ ಕುಮಾರ್ ಶೆಟ್ಟಿ, ಉದ್ಯಮಿ ದೋಟ ಸುರೇಶ್ ಶೆಟ್ಟಿ, ಬೋಳ ವಿಶ್ವನಾಥ ಕಾಮತ್, ಅನುವಂಶಿಕ ಮೊಕ್ತೇಸರ ಸುಕುಮಾರ ಬಲ್ಲಾಲ್ ಮುಖ್ಯ ಅತಿಥಿಗಳಾಗಿದ್ದರು. ಟ್ರಸ್ಟ್ ಅಧ್ಯಕ್ಷ ದಯಾನಂದ ಪೈ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್ ಮಾರ್ನಾಡು ಉಪಸ್ಥಿತರಿದ್ದರು. ನಿವೃತ್ತ ದೈಹಿಕ ಶಿಕ್ಷಕ ಕಿಶೋರ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರನ್ನು ಬಹುಮಾನ ನೀಡಿ ಗೌರವಿಸಲಾಯಿತು.