MOODUBIDIRE
Bidire News

ಪೋಲಿಯೋ ನಿರ್ಮೂಲನೆಗೆ ರೋಟರಿ ಜಿಲ್ಲೆ 3181ರ ಮೂಡುಬಿದಿರೆಯಲ್ಲಿ ಜಾಗೃತಿ ಜಾಥಾ

ಮೂಡುಬಿದಿರೆ: ವಿಶ್ವ ಪೋಲಿಯೋ ದಿನಾಚರಣೆ ಅಂಗವಾಗಿ ರೋಟರಿ ಜಿಲ್ಲೆ 3181ರ ವತಿಯಿಂದ ಸಾರ್ವಜನಿಕರಲ್ಲಿ ಪೋಲಿಯೋ ನಿರ್ಮೂಲನೆ ಕುರಿತು ಅರಿವು ಮೂಡಿಸುವ ಬೃಹತ್ ಜಾಗೃತಿ ವಾಹನ ಯಾತ್ರೆ ಶನಿವಾರ ಮೂಡುಬಿದಿರೆಗೆ ಆಗಮಿಸಿತು.
ಮಂಗಳೂರಿನ ಕೆಪಿಟಿ ಸೈನಿಕ ಸ್ಮಾರಕದ ಬಳಿ ರೋಟರಿ ಜಿಲ್ಲಾ ರಾಜ್ಯಪಾಲ ಸತೀಶ್ ಬೋಳಾರ ಜಾಗೃತಿ ರ‍್ಯಾಲಿಗೆ ಚಾಲನೆ ನೀಡಿದರು. ಬಿಜೈ, ಸುರತ್ಕಲ್ ಹಾಗೂ ಮುಲ್ಕಿ ಮೂಲಕ ಸಾಗಿದ ಜಾಥಾ ಮೂಡುಬಿದಿರೆ ತಲುಪಿತು.
ಮಹಾವೀರ ಕಾಲೇಜು ಬಳಿ ಮಾಜಿ ಸಚಿವ ಅಭಯಚಂದ್ರ ಜೈನ್, ರೋಟರಿ ಪಲ್ಸ್ ಪೋಲಿಯೋ ಜಿಲ್ಲಾ ಸಂಚಾಲಕ ಡಾ. ಮಹಾವೀರ ಜೈನ್ ಹಾಗೂ ಕಾರ್ಯಕ್ರಮ ಸಂಯೋಜಕರಾದ ಮೂಡುಬಿದಿರೆ ರೋಟರಿ ಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ಡೆನ್ನಿಸ್ ಪಿರೇರಾ ಜಾಥಾವನ್ನು ಸ್ವಾಗತಿಸಿದರು. ಬಳಿಕ ಮೂಡುಬಿದಿರೆಯ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಜಾಥಾ ಬಸ್ ನಿಲ್ದಾಣ ತಲುಪಿತು. ಅಲ್ಲಿ ಸಭೆ ನಡೆಯಿತು.
ರೋಟರಿ ಜಿಲ್ಲಾ ಉಪರಾಜ್ಯಪಾಲ ಶ್ರೀಕಾಂತ ಕಾಮತ್ ಪೋಲಿಯೋ ನಿರ್ಮೂಲನೆಗಾಗಿ ಕೈಗೊಂಡ ಜಾಥಾವನ್ನು ಶ್ಲಾಘಿಸಿದರು. ಡಾ. ಮಹಾವೀರ ಜೈನ್ ಜಾಥಾದ ಮಹತ್ವವನ್ನು ತಿಳಿಸಿದರು. ಟೆಂಪಲ್ ಟೌನ್ ಅಧ್ಯಕ್ಷ ಡೆನ್ನಿಸ್ ಪಿರೇರಾ ವಂದಿಸಿದರು.
ರೋಟರಿ ವಲಯ ಅಧ್ಯಕ್ಷ ಪೂರ್ಣಚಂದ್ರ ಜೈನ್, ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಡಾ. ಆಶೀರ್ವಾದ್, ಕಾರ್ಯದರ್ಶಿ ಪ್ರಜ್ವಲ್ ಆಚಾರ್ಯ, ರೋಟರಿ ಮಿಡ್ ಟೌನ್ ಅಧ್ಯಕ್ಷ ಮುರಳೀಧರ ಕೋಟ್ಯಾನ್, ಸಿದ್ಧಕಟ್ಟೆ ಪಲ್ಗುಣಿ ರೋಟರಿ ಅಧ್ಯಕ್ಷೆ ಟೀನಾ ಡಿಸೋಜ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಾ. ಅಮರ್‌ದೀಪ್ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಆಳ್ವಾಸ್ ನರ್ಸಿಂಗ್ ವಿದ್ಯಾರ್ಥಿಗಳು ಪೋಲಿಯೋ ನಿರ್ಮೂಲನೆಯ ಕುರಿತು ಬೀದಿ ನಾಟಕ ಪ್ರದರ್ಶಿಸಿದರು.