MOODUBIDIRE
Bidire News

ಶ್ರೀದುರ್ಗಾ ಸ್ವಸಹಾಯ ಸಂಘದ 13ನೇ ವಾರ್ಷಿಕೋತ್ಸವದಂಗವಾಗಿ ದೇಶೀ ಗೋವಿನ ಜಾಗೃತಿ: ಗೋಹತ್ಯಾ ನಿಷೇಧ ಆಗ್ರಹಿಸಿ ಒಂಟಿಕಟ್ಟೆಯಲ್ಲಿ ಸಹಿ ಸಂಗ್ರಹ ಅಭಿಯಾನ

ಮೂಡುಬಿದಿರೆ: ವಂದೇಮಾತರಂ ಸೌಹಾರ್ದ ಸಹಕಾರಿ ಸಂಘದ ಪ್ರವರ್ತಿತ ಒಂಟಿಕಟ್ಟೆಯ ಶ್ರೀದುರ್ಗಾ ಸ್ವಸಹಾಯ ಸಂಘದ 13ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಗೋಹತ್ಯಾ ನಿಷೇಧ, ದೇಶೀ ಗೋವಿನ ಸಂರಕ್ಷಣೆ ಹಾಗೂ ಗೋವಿಗೆ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಸ್ವರ್ಗೀಯ ಜಿ.ಕೆ. ಭಟ್ ಸ್ಮರಣಾರ್ಥ ಒಂಟಿಕಟ್ಟೆಯ ಗುಳಿಗ ದೈವಸ್ಥಾನದಲ್ಲಿ ನಾಗಲಿಂಗ ಪುಷ್ಪದ ಗಿಡವನ್ನು ನೆಡಲಾಯಿತು. ಬಳಿಕ ಅಗ್ನಿಹೋತ್ರದ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ನೀಡಲಾಯಿತು. ಅಗ್ನಿಹೋತ್ರದಿಂದ ಉಂಟಾಗುವ ಪ್ರಾಕೃತಿಕ ಮತ್ತು ಭೌತಿಕ ಪ್ರಯೋಜನಗಳ ಕುರಿತು ಮಾಹಿತಿ ನೀಡಲಾಯಿತು.
ಇದೇ ಸಂದರ್ಭದಲ್ಲಿ ದೇಶೀ ಗೋವಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದರ ಜತೆಗೆ ಗೋಹತ್ಯೆ ನಿಷೇಧ ಮತ್ತು ಗೋವಿಗೆ ರಾಷ್ಟ್ರೀಯ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ರಾಜಾರಂ ನಾಗರಕಟ್ಟೆ, ವಂದೇಮಾತರಂ ನಿರ್ದೇಶಕ ರೋಹನ್, ಅಮೃತ ಸಾವಯವ ಮಳಿಗೆಯ ಮಾಲಕ ಅಶೋಕ್ ಭಂಡಾರಿ ಅಲಂಗಾರು, ಒಂಟಿಕಟ್ಟೆ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್, ವಿಶ್ವನಾಥ ಒಂಟಿಕಟ್ಟೆ, ಶ್ರೀದುರ್ಗಾ ಸ್ವಸಹಾಯ ಸಂಘದ ಸದಸ್ಯರು, ಮೇಲ್ವಿಚಾರಕಿ ನಂದಿತಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಅಶೋಕ್ ಭಂಡಾರಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಾಹಿತಿ ಕಾರ್ಯಾಗಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದವರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.