ಮೂಡುಬಿದಿರೆಯಲ್ಲಿ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಮೃತ ಮಹೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

BIDIRE NEWS

ಮೂಡುಬಿದಿರೆ: ಇಲ್ಲಿನ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮೂಡುಬಿದಿರೆ, ಶ್ರೀ ನಾರಾಯಣ ಗುರು ಸೇವಾದಳ ಮತ್ತು ಶ್ರೀ ನಾರಾಯಣ ಗುರು ಮಹಿಳಾ ಘಟಕ ಹಾಗೂ ಅಮೃತ ಮಹೋತ್ಸವ ಸಮಿತಿಯ ವತಿಯಿಂದ ಡಿಸೆಂಬರ್ 28ರಂದು ನಡೆಯಲಿರುವ ಅಮೃತ ಮಹೋತ್ಸವ - 2025 ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು.


ಸಂಘದ ಅಧ್ಯಕ್ಷರಾದ ಸುರೇಶ್ ಕೆ. ಪೂಜಾರಿ ಅವರ ನೇತೃತ್ವದಲ್ಲಿ, ಸಂಚಾಲಕರಾದ ಡಾ. ಮುರಳಿಕೃಷ್ಣ, ಎಸಿಎಫ್ ಪ್ರಕಾಶ್ ಸಹಿತ ಗಣ್ಯರು ಪತ್ರಿಕೆಯನ್ನು ಬಿಡುಗಡೆ ಮಾಡಿದರು.

ಸುರೇಶ್ ಕೆ.ಪೂಜಾರಿ ಅವರು ಅಮೃತ ಮಹೋತ್ಸವದ ಸಲುವಾಗಿ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳ ಕುರಿತು ಗಣ್ಯರು ಮಾರ್ಗದರ್ಶನ ನೀಡಿದರು. ಅಮೃತ ಮಹೋತ್ಸವದ ಅಂಗವಾಗಿ ಬೃಹತ್ ಮೆರವಣಿಗೆ ಆಯೋಜಿಸಲಾಗಿದ್ದು, ವೆಂಕಟರಮಣ ದೇಗುಲದಿಂದ ಬಿಲ್ಲವ ಸಂಘದವರೆಗೆ ನಡೆಯಲಿರುವ ಈ ಮೆರವಣಿಗೆಯಲ್ಲಿ ವಿವಿಧ ಚೆಂಡೆ, ವಾದ್ಯ, ಭಜನೆ ಹಾಗೂ ಕಲಶಗಳ ಸಹಿತ ಸುಮಾರು 5,000 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ವಿವಿಧ ಕಡೆಗಳಿಂದ ಬಿಲ್ಲವ ಸಮಾಜದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ವಿವಿಧ ಜವಾಬ್ದಾರಿಗಳನ್ನು ಒಳಗೊಂಡ ಪದಾಧಿಕಾರಿಗಳು ಇದರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಯಿತು.

ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಬಿಲ್ಲವ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರು ಮತ್ತು ಗಣ್ಯರನ್ನು ಸನ್ಮಾನಿಸಲಾಗುವುದು. ಜೊತೆಗೆ, ಸಮಾಜದ ವಿದ್ಯಾನಿಧಿಗಾಗಿ ಎಲ್ಲಾ ಬಂಧುಗಳು ಸಹಕರಿಸಬೇಕೆಂದು ಮನವಿ ಮಾಡಲಾಯಿತು.

ಸಂಘದ ಉಪಾಧ್ಯಕ್ಷ ರವೀಂದ್ರ ಕರ್ಕೇರ, ಸುಶಾಂತ್ ಕರ್ಕೇರ, ಸಂಘಟನಾ ಕಾರ್ಯದರ್ಶಿ ಲಕ್ಷ್ಮಣ್ ಪೂಜಾರಿ, ಸೇವಾದಳದ ಅಧ್ಯಕ್ಷ ದಿನೇಶ್ ಮಾರೂರು, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್, ಕೋಶಾಧಿಕಾರಿ ಜಗದೀಶ್ ಮಿಜಾರ್ ಮತ್ತಿತರ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೇಲು  ಕಾರ್ಯಕ್ರಮ ನಿರೂಪಿಸಿದರು.