ಮೂಡಬಿದಿರೆ: 60ನೇ ವರ್ಷದ ಹೊಸ್ತಿಲಲ್ಲಿರುವ ಮೂಡಬಿದಿರೆ ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.
ಬ್ರೈಟ್ ಹೊರೈಝನ್ ಇಂಟರ್‌ನ್ಯಾಷನಲ್ ಶಾಲೆಯ ಅಧ್ಯಕ್ಷ, ವೈಬ್ರೆಂಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಡಾ. ಶರತ್ ಗೋರೆ ಮಾತನಾಡಿ, "ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ಕಾಲೇಜಿನ ಸೇವೆ ಶ್ಲಾಘನೀಯ. ವಿದ್ಯಾರ್ಥಿಗಳು ಯಾರಿಂದಲೂ ಕಿತ್ತುಕೊಳ್ಳಲಾಗದಂತಹ ಜ್ಞಾನವನ್ನು ಪಡೆಯುವುದರ ಜೊತೆಗೆ, ಶಿಸ್ತು, ಗುಣಮಟ್ಟ ಮತ್ತು ಋಜುಮಾರ್ಗದಲ್ಲಿ ನಡೆದರೆ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.
ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ. ರಮೇಶ್ ಭಟ್ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಇಷ್ಟಪಟ್ಟು ಓದಬೇಕು. ನೀವು ಆಯ್ಕೆ ಮಾಡಿದ ಯಾವುದೇ ಕ್ಷೇತ್ರದಲ್ಲಿ ಆಸಕ್ತಿಯಿಂದ ಕೆಲಸ ಮಾಡಿ, ಎಲ್ಲರಿಗೂ ಒಳಿತನ್ನು ಬಯಸಿದರೆ ಅದೃಷ್ಟ ಸದಾ ನಿಮ್ಮೊಂದಿಗಿರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಸಂಪತ್ ಸಾಮ್ರಾಜ್ಯ ಅವರು, "ಕಲಿಕೆ ಎಂದೂ ಮುಗಿಯುವುದಿಲ್ಲ. ಪ್ರಯತ್ನಪಟ್ಟರೆ ಏನನ್ನಾದರೂ ಸಾಧಿಸಬಹುದು. ಬದ್ಧತೆ, ಆಸಕ್ತಿ ಮತ್ತು ಅತ್ಯುತ್ತಮ ವ್ಯಕ್ತಿತ್ವ ಇದ್ದರೆ ಗುರಿ ಮುಟ್ಟಲು ಸಾಧ್ಯ," ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡಾ ಸಾಧನೆಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಪ್ರೊ. ಎಂ. ರಮೇಶ್ ಭಟ್ ಅವರ ಸಾರ್ಥಕ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು.
ಪದವಿ ಕಾಲೇಜಿನ ಪದವಿ ಪ್ರಾಂಶುಪಾಲ ಡಾ. ರಾಧಾಕೃಷ್ಣ, ಪಿಯು ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮೀ, ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಪೂರ್ಣಿಮ ಮತ್ತು ಸಂಯುಕ್ತ ಕಾರ್ಯದರ್ಶಿ ಶಾಲಿನಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಪೂರ್ಣಿಮ ಸ್ವಾಗತಿಸಿ, ರಮೀಜಾ ಫಾತಿಮ ನಿರೂಪಿಸಿ, ಶಾಲಿನಿ ವಂದಿಸಿದರು.

