ಮೂಡುಬಿದಿರೆ: ತೆಂಕಮಿಜಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಂಕಮಿಜಾರು ಹಾಗೂ ಬಡಗಮಿಜಾರು ಗ್ರಾಮಗಳ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಕಲಚೇತನರ ಕುಂದುಕೊರತೆ ಸಭೆ ಮತ್ತು ವಿವಿಧ ಯೋಜನೆಗಳ ಸವಲತ್ತುಗಳ ವಿತರಣಾ ಕಾರ್ಯಕ್ರಮವು ಶನಿವಾರ ಅಶ್ವತ್ಥಪುರ ಸಂತೆಕಟ್ಟೆಯ ವಿವಿದೋದ್ದೇಶ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು ಉದ್ಘಾಟಿಸಿ, ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಶುಭ ಹಾರೈಸಿದರು.
ಪಂಚಾಯತ್‌ನಿಂದ 163 ಫಲಾನುಭವಿಗಳಿಗೆ ನೆರವು ವಿತರಣೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತೆಂಕಮಿಜಾರು ಗ್ರಾ. ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್, ಪಂಚಾಯತ್‌ನ ಸ್ವಂತ ಸಂಪನ್ಮೂಲ ನಿಧಿ ಹಾಗೂ ಮೀಸಲು ನಿಧಿಗಳ ಮೂಲಕ ವಿತರಿಸಿದ ಸವಲತ್ತುಗಳ ಕುರಿತು ಮಾಹಿತಿ ನೀಡಿದರು.
ಅಂಗವಿಕಲರ ಶ್ರೇಯೋಭಿವೃದ್ಧಿ ನಿಧಿಯಿಂದ 65 ಫಲಾನುಭವಿಗಳಿಗೆ ತಲಾ ಎರಡು ಸಾವಿರದಂತೆ ಒಟ್ಟು 1.30 ಲಕ್ಷ ರೂಪಾಯಿ ವಿತರಿಸಲಾಯಿತು.ರೂ. 1 ಲಕ್ಷ ವೆಚ್ಚದಲ್ಲಿ 23 ಫಲಾನುಭವಿಗಳಿಗೆ ಸಿಂಟೆಕ್ಸ್ ಟ್ಯಾಂಕ್‌ಗಳನ್ನು ವಿತರಿಸಲಾಯಿತು. ರೂ. 2 ಲಕ್ಷ ವೆಚ್ಚದಲ್ಲಿ 69 ವಿದ್ಯಾರ್ಥಿಗಳಿಗೆ ಸ್ಟಡಿ ಟೇಬಲ್‌ಗಳನ್ನು ವಿತರಿಸಲಾಯಿತು.6 ಮಂದಿಗೆ ವೈದ್ಯಕೀಯ ವೆಚ್ಚಕ್ಕಾಗಿ ತಲಾ 5 ಸಾವಿರದಂತೆ 30 ಸಾವಿರದ ಚೆಕ್‌ಗಳನ್ನು ವಿತರಿಸಲಾಯಿತು.
ಇನ್ನುಳಿದ ಬಾಕಿ ಫಲಾನುಭವಿಗಳಿಗೆ ಸವಲತ್ತುಗಳನ್ನು ಪಂಚಾಯತ್ ಕಚೇರಿಯಲ್ಲಿ ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾದಸ್ವರ ವಾದಕ ದಿನೇಶ್ ಅವರನ್ನು ಪಂಚಾಯತ್ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತಿ ಹೊಂದಿದ ಆಶಾ ಕಾರ್ಯಕರ್ತೆಯರಾದ ಯಶೋಧ ಮತ್ತು ಬೇಬಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಕಮಲ ಅವರನ್ನು ಗೌರವಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಲ್ಲಮುಂಡ್ಕೂರು ವಲಯದ ಮೇಲ್ವಿಚಾರಕಿ ಶುಭ, ಗ್ರಾಮ ಆಡಳಿತಾಧಿಕಾರಿಗಳಾದ ತೆಂಕಮಿಜಾರಿನ ಸಂತೋಷ್ ಮತ್ತು ಬಡಗಮಿಜಾರಿನ ಅರ್ಜುನ್ ಅವರು ಇಲಾಖಾ ಮಾಹಿತಿಗಳನ್ನು ನೀಡಿದರು.
ಪಂಚಾಯತ್ ಸದಸ್ಯರಾದ ರುಕ್ಮಿಣಿ, ಹರಿಪ್ರಸಾದ್ ಶೆಟ್ಟಿ, ಸಮಿತಾ, ನಮಿತಾ, ದಿನೇಶ್ ಎಲ್., ವಿದ್ಯಾನಂದ ಶೆಟ್ಟಿ, ಮಹೇಶ್, ನಿಶಾ, ಯೋಗಿನಿ, ಲಕ್ಷ್ಮೀ ಮತ್ತು ಗೀತಾ ಅವರು ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ ಬಿ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ರಮೇಶ್ ಬಂಗೇರಾ ಅವರು ಫಲಾನುಭವಿಗಳ ವಿವರ ನೀಡಿದರು. ರಾಕೇಶ್ ಭಟ್ ವಂದನಾರ್ಪಣೆ ಮಾಡಿದರು.


