ಮೂಡುಬಿದಿರೆ:ಅಲಂಗಾರು ಶ್ರೀ ಅಯ್ಯ ಸ್ವಾಮೀ ಮಠದಲ್ಲಿ ಶುಕ್ರವಾರ ಶ್ರೀ ಗುರು ಆರಾಧನೆ ಭಕ್ತಿಭಾವದಿಂದ ನೆರವೇರಿತು.
ಬೆಳಗ್ಗೆ ಶ್ರೀ ಮಠದಿಂದ ಪಾದುಕೆಗಳ ಸಹಿತ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನಕ್ಕೆ ಸಂಪ್ರದಾಯಬದ್ಧ ಸಂದರ್ಶನ ನಡೆಯಿತು. ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಮಠಕ್ಕೆ ಪುನರಾಗಮನಗೊಂಡು ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕ ಪುರೋಹಿತ ಬಿ. ವಿಶ್ವನಾಥ ಆಚಾರ್ಯ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಶ್ರೀ ಮಠದ ಪ್ರಮುಖರಾಗಿದ್ದ ದಿ. ಬಿ.ಎಸ್. ರುದ್ರಯ್ಯ ಪುರೋಹಿತರ ಶಿಷ್ಯವರ್ಗದವರು, ವೈದಿಕ ವೃಂದ ಹಾಗೂ ಸ್ಥಳೀಯ ಭಕ್ತರು ಭಾಗವಹಿಸಿದ್ದರು. ಮಠದ ಜೀರ್ಣೋದ್ಧಾರ ಶೀಘ್ರ ನೆರವೇರಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಶ್ರೀ ವಿಶ್ವಕರ್ಮ ಸಂಸ್ಕೃತಿ ಪ್ರಸಾರ ಪ್ರತಿಷ್ಠಾನದ ವತಿಯಿಂದ ಶಿಲ್ಪ ದರ್ಶಕ ತಾಳಮದ್ದಳೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ತಾಳಮದ್ದಳೆಯ ಭಾಗವತರಾಗಿ ಡಿ.ಕೆ. ಆಚಾರ್ಯ ಅಲಂಗಾರು ಭಾಗವಹಿಸಿದ್ದು, ಶ್ರಾವ್ಯಾ ತಳಕಳ, ಶಮಾ ತಳಕಳ, ಪೂಜಾ ಶಿರ್ತಾಡಿ (ಚೆಂಡೆ, ಮದ್ದಳೆ, ಚಕ್ರತಾಳ) ವಾದ್ಯ ಸಹಕಾರ ನೀಡಿದರು. ಅರ್ಥಧಾರಿಗಳಾಗಿ ಜಬ್ಬಾರ್ ಸಮೋ, ಸತೀಶ ಆಚಾರ್ಯ ಮಾಣಿ, ದಿವಾಕರ ಗೇರುಕಟ್ಟೆ ಹಾಗೂ ಹರೀಶ್ ಬಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಿ.ಎಸ್. ಪುರಂದರ ಪುರೋಹಿತರು ನಿರೂಪಿಸಿದರು.

