ಸಾಮರಸ್ಯದ ಸಂದೇಶದೊಂದಿಗೆ ಕಲ್ಲಬೆಟ್ಟಿನಲ್ಲಿ ಹಿಂದೂ ಸಂಗಮ

BIDIRE NEWS

ಮೂಡುಬಿದಿರೆ: ನಮ್ಮ ದೇಶದಲ್ಲಿ ನೂರಾರು ಜಾತಿಗಳಿದ್ದರೂ ನಾವೆಲ್ಲರೂ ಒಂದೇ ಹಿಂದೂ ರಾಷ್ಟ್ರಕ್ಕೆ ಸೇರಿದವರೆಂಬ ಭಾವನೆ ಬೆಳೆದಾಗ ಮಾತ್ರ ಸಮಾಜದಲ್ಲಿ ನಿಜವಾದ ಜಾಗೃತಿ ಮೂಡುತ್ತದೆ. ಜಾತಿಯ ಗೆರೆಯನ್ನು ಮೀರಿ, ಯಾವುದೇ ಹಿಂದೂ ಸಮಾಜದ ವ್ಯಕ್ತಿಯನ್ನು ನಮ್ಮ ಮನೆಯೊಳಗೆ ಆತ್ಮೀಯವಾಗಿ ಸ್ವೀಕರಿಸುವ ಮನೋಭಾವ ಬೆಳೆದಾಗ ನಮ್ಮ ಮನೆಗಳು ಸಾಮರಸ್ಯದ ಮನೆಗಳಾಗುತ್ತವೆ ಎಂದು ಕಲ್ಲಡ್ಕ ಶ್ರೀರಾಮ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಹೇಳಿದರು.

ಅವರು ಹಿಂದೂ ಸಂಗಮ ಆಯೋಜನಾ ಸಮಿತಿ, ಮೂಡುಬಿದಿರೆ ತಾಲೂಕಿನ ಕಲ್ಲಬೆಟ್ಟು ಮಂಡಲದ ವತಿಯಿಂದ ಭಾನುವಾರ ಕಲ್ಲಬೆಟ್ಟು ಮಹಮ್ಮಾಯಿ ದೇವಸ್ಥಾನದ ಆವರಣದಲ್ಲಿ ದಿವಂಗತ ಸಂಜೀವ ಆಚಾರ್ಯ ವೇದಿಕೆಯಲ್ಲಿ ನಡೆದ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಬೌದ್ಧಿಕ ಉಪನ್ಯಾಸ ನೀಡಿದರು.

ಆರ್‌ಎಸ್‌ಎಸ್ ಸಂಘಟನೆಗೆ ನೂರು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಹಿಂದೂ ಸಮಾಜದಲ್ಲಿ ಕುಟುಂಬ ವ್ಯವಸ್ಥೆ, ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ, ಸ್ವದೇಶಿ ಆಚರಣೆ ಹಾಗೂ ನಾಗರಿಕ ಶಿಷ್ಠಾಚಾರಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಇದು ಯಾರನ್ನೂ ಹೆದರಿಸಲು ಅಥವಾ ಬೆದರಿಸಲು ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಾರೂರು ಖಂಡಿಗದ ರಾಮದಾಸ ಅಸ್ರಣ್ಣ ಮಾತನಾಡಿ, ಭಾರತ ಭವ್ಯ ಪರಂಪರೆಯ ದೇಶ. ಪರಿಶುದ್ಧ ಮನಸ್ಸಿನಿಂದ ನಾವು ಅನುಸರಿಸುವ ಆಚರಣೆಗಳೇ ನಿಜವಾದ ಧರ್ಮ. ಹಿಂದೂ ಧರ್ಮ ನಶಿಸದಂತೆ ಇಂತಹ ಸಂಘಟನೆಗಳು ನಿರಂತರವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಆಯೋಧ್ಯೆ ಕರಸೇವೆಯಲ್ಲಿ ಪಾಲ್ಗೊಂಡ ಕಲ್ಲಬೆಟ್ಟಿನ ಶೀನ ಸುವರ್ಣ, ನಾರಾಯಣ, ರವೀಂದ್ರ ಪೈ, ಸುರೇಶ್ ಆಚಾರ್ಯ ಹಾಗೂ ಕೃಷ್ಣಪ್ಪ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಲ್ಲಬೆಟ್ಟು ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಿವಾನಂದ ಪೈ, ಶಂಭು ಶೆಟ್ಟಿ ಮಾರೂರು ಗುತ್ತು, ಪಾಣರ ಯಾನೆ ನಲಿಕೆ ಸಂಘದ ಜಿಲ್ಲಾಧ್ಯಕ್ಷ ಎನ್.ಕೆ. ಸಾಲ್ಯಾನ್, ಮಹಮ್ಮಾಯಿ ದೇವಸ್ಥಾನದ ಅಧ್ಯಕ್ಷ ಸುಂದರ ಶೆಟ್ಟಿ, ಗೋಪಾಲ ಪೂಜಾರಿ, ಪತ್ರಕರ್ತ ಪ್ರೇಮಶ್ರೀ ಕಲ್ಲಬೆಟ್ಟು, ಹಿಂದೂ ಸಂಗಮ ಸಮಿತಿಯ ಸಂಚಾಲಕ ನವೀನ್ ಕುಮಾರ್, ಸಹ ಸಂಚಾಲಕ ಪ್ರವೀಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಿತಿಯ ಕೋಶಾಧಿಕಾರಿ ಗೋಪಾಲಕೃಷ್ಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಘಾ ಕಾಮತ್ ವಂದೇ ಮಾತರಂ ಹಾಡಿದರು. ಶೋಭಾ ಸುರೇಶ್ ಹಾಗೂ ತುಷಿತಾ ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ಪೈ ವಂದಿಸಿದರು.

ಹಿಂದೂ ಸಂಗಮಕ್ಕೆ ಶೋಭಾಯಾತ್ರೆಯ ಮೆರಗು

ನಿವೃತ್ತ ಶಿಕ್ಷಕ ಶಿಕಾರಿಪುರ ಈಶ್ವರ ಭಟ್ ಮಹಾವೀರ ಕಾಲೇಜು ಬಳಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಬಾಹುಬಲಿ ಪ್ರಸಾದ್, ಯತೀಶ್ ಕೋಟ್ಯಾನ್, ಶಶಿಕಿರಣ್, ರೋಹನ್ ಅತಿಕಾರಬೆಟ್ಟು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿವಿಧ ಕುಣಿತ–ಭಜನಾ ತಂಡಗಳು, ಕೇರಳ ಚೆಂಡೆ ವಾದ್ಯ, ಭಾರತ ಮಾತೆಯ ವೇಷಧಾರಿಗಳು, ಪೂರ್ಣಕುಂಭ ಹಿಡಿದ ಮಹಿಳೆಯರು ಹಾಗೂ ಕಾರ್ಯಕರ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸಿ ಗಮನಸೆಳೆದರು.


slider