ಮೂಡುಬಿದಿರೆ: ವೈವಿಧ್ಯತೆಯಲ್ಲಿಯೇ ಏಕತೆ ದೇಶದ ಶ್ರೇಷ್ಠತೆಯ ಮೂಲಾಧಾರವಾಗಿದೆ. ಜಾತಿ–ಮತ ಭೇದ ಮೀರಿದ ಸಹಬಾಳ್ವೆ ಮತ್ತು ಸಮಾನತೆಯ ಭಾವನೆಯೇ ರಾಷ್ಟ್ರದ ಬಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೇಳಿದರು.
ಅವರು ಸೋಮವಾರ ಪುಟ್ಟಿಗೆ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ಬೃಹತ್ ಬಯಲು ರಂಗಮಂದಿರದಲ್ಲಿ ನಡೆದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಾನೂನು ಉಲ್ಲಂಘನೆ, ಅರಾಜಕತೆ ಹಾಗೂ ಅಸಮಾನತೆಗಳಂತಹ ಸಂದರ್ಭಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವ ಹೊಣೆ ನ್ಯಾಯಾಲಯದ ಮೇಲಿದೆ. ಸಂವಿಧಾನವೇ ದೇಶದ ಪರಮಾಧಿಕಾರ. ನ್ಯಾಯಾಲಯವು ಸಂವಿಧಾನದ ಸಂರಕ್ಷಕವಾಗಿ ಜಾಗೃತಿಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.
30 ಸಾವಿರ ಜನರಿಂದ ರಾಷ್ಟ್ರಭಕ್ತಿ ಸಂಭ್ರಮ
ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು, ಬೋಧಕ–ಬೋಧಕೇತರ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಸೇರಿ 30 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿ ರಾಷ್ಟ್ರಭಕ್ತಿಯ ವಾತಾವರಣ ನಿರ್ಮಿಸಿದರು.
ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. ಬಳಿಕ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ತ್ರಿವರ್ಣ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆ ‘ಜನ ಗಣ ಮನ’ಕ್ಕೆ ಗೌರವ ವಂದನೆ ಸಲ್ಲಿಸಲಾಯಿತು.
ವೇದಿಕೆಯ ಮೇಲ್ಭಾಗದಲ್ಲಿ ತಿರಂಗಾ ಹಾರಿದರೆ, ಸಭಾಂಗಣದಲ್ಲಿ ನಿಂತ ವಿದ್ಯಾರ್ಥಿಗಳು ತ್ರಿವರ್ಣದ ಮೂಲಕ ‘ಭಾರತ ಹಿಂದಿ ಅಕ್ಷರ ರೂಪ’ ನಿರ್ಮಿಸಿ ದೇಶಪ್ರೇಮದ ಸಂದೇಶ ನೀಡಿದರು.
ಆಳ್ವಾಸ್ ಸಂಸ್ಥೆಯ 6,257 ವಿದ್ಯಾರ್ಥಿಗಳು ಕೇಸರಿ–ಬಿಳಿ–ಹಸಿರು ಬಣ್ಣಗಳಲ್ಲಿ ಭಾರತದ ನಕ್ಷೆ ರೂಪಿಸಿ ಎಲ್ಲರ ಗಮನ ಸೆಳೆದರು. ಸಾಂಸ್ಕೃತಿಕ ಗಾಯನ ತಂಡದ ದೇಶಭಕ್ತಿ ಗೀತೆಗಳು ಸಭಾಂಗಣವನ್ನು ಕಂಗೊಳಿಸಿತು. ತ್ರಿವರ್ಣ ಸಿಂಹ ವೇಷಧಾರಿಗಳ ವಿಶೇಷ ಮೆರುಗು ಕಾರ್ಯಕ್ರಮಕ್ಕೆ ಆಕರ್ಷಣೆ ನೀಡಿತು.
ಆವರಣದ ಎಲ್ಲೆಡೆ ಕೇಸರಿ–ಬಿಳಿ–ಹಸಿರು ಅಲಂಕಾರ ಕಂಗೊಳಿಸಿತು. ಸುಮಾರು 300ಕ್ಕೂ ಅಧಿಕ ಮಾಜಿ ಸೈನಿಕರು ಧ್ವಜಕ್ಕೆ ವಂದನೆ ಸಲ್ಲಿಸಿದರು. ತ್ರಿವರ್ಣ ಬಲೂನ್‌ಗಳ ಮೂಲಕ ಆಕಾಶಮಂಡಲವೂ ರಾಷ್ಟ್ರಬಣ್ಣಗಳಿಂದ ಮಿನುಗಿತು.
ಗೌರವ, ಬಹುಮಾನ ವಿತರಣೆ
ಕಾರ್ಯಕ್ರಮದ ಆರಂಭದಲ್ಲಿ ಎನ್‌ಸಿಸಿ ಸೀನಿಯರ್ ಅಂಡರ್ ಆಫೀಸರ್ ಗೌರಿ ಜಿ.ಪಿ. ಅವರು ನ್ಯಾಯಮೂರ್ತಿ ಸಂದೇಶ್ ಅವರಿಗೆ ಗೌರವ ಶಿರಪೇಟು ಸಲ್ಲಿಸಿದರು. ಸೀನಿಯರ್ ಅಂಡರ್ ಆಫೀಸರ್ ಯದುನಂದನ್ ಪರೆಡ್ ವರದಿ ವಾಚಿಸಿದರು.
ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಅಕ್ಷಯ ಹೆಗ್ಡೆ ಅವರಿಗೆ ರೂ. 2 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ. ವಿನಯ್ ಆಳ್ವ, ಶ್ರೀಪತಿ ಭಟ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ಪಿಜಿಆರ್ ಸಿಂಧಾ ಉಪಸ್ಥಿತರಿದ್ದರು.
ಫ್ಲಾಗ್ ಏರಿಯಾದಲ್ಲಿ ರೂಪಿಸಲಾದ ‘ವಸುಧೈವ ಕುಟುಂಭಕಂ’ ಪರಿಕಲ್ಪನೆಯ ಮಣ್ಣಿನ ಕಲಾಕೃತಿ ಎಲ್ಲರ ಗಮನ ಸೆಳೆಯಿತು.
ಉಪನ್ಯಾಸಕರಾದ ರಾಜೇಶ್ ಡಿಸೋಜ ಹಾಗೂ ಕಲಾ ವಿಭಾಗದ ಡೀನ್ ಕೆ. ವೇಣುಗೋಪಾಲ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.





