ಬಡಗಮಿಜಾರು: ಬಾವಿಗೆ ಬಿದ್ದ ಹಸು-ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ

BIDIRE NEWS

ಮೂಡುಬಿದಿರೆ: ಬಡಗಮಿಜಾರು ಗ್ರಾಮ ವ್ಯಾಪ್ತಿಯಲ್ಲಿ ಸೋಮವಾರ ಸಂಭವಿಸಿದ ಘಟನೆಯಲ್ಲಿ, ಸುಮಾರು 60 ಅಡಿ ಆಳದ ಬಾವಿಗೆ ಬಿದ್ದಿದ್ದ ಹಸುವನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಯಶಸ್ವಿಯಾಗಿ ರಕ್ಷಿಸಿದ್ದಾರೆ.


ಬಡಗಮಿಜಾರು ನಿವಾಸಿ ಜಯರಾಮ್ ಗೌಡ ಅವರಿಗೆ ಸೇರಿದ ಸುಮಾರು 60 ಅಡಿ ಆಳ ಹಾಗೂ 5 ಅಡಿ ಅಗಲದ ಬಾವಿಗೆ ಹಸು ಆಕಸ್ಮಿಕವಾಗಿ ಬಿದ್ದಿತ್ತು. ಹಸುವಿನ ಕಿರುಚಾಟ ಕೇಳಿ ಎಚ್ಚೆತ್ತ ಮನೆಯವರು ಹಾಗೂ ಸ್ಥಳೀಯರು ತಕ್ಷಣ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು.

ಸುದ್ದಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಅತ್ಯಂತ ಜಾಗರೂಕತೆಯಿಂದ ಬಾವಿಗಿಳಿದು, ಹಸುವಿಗೆ ಯಾವುದೇ ಗಾಯವಾಗದಂತೆ ಹಗ್ಗದ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆತ್ತಿದರು. ಆಳವಾದ ಬಾವಿಯಲ್ಲಿಯೂ ಮಾನವೀಯತೆ ಹಾಗೂ ಸಾಹಸ ಪ್ರದರ್ಶಿಸಿದ ಸಿಬ್ಬಂದಿಗಳ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಯಶಸ್ವಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯಕ ಠಾಣಾಧಿಕಾರಿ ದಿವಾಕರ್ ಆಚಾರ್ಯ, ಸಿಬ್ಬಂದಿಗಳಾದ ಪ್ರಸಾದ್, ಪ್ರವೀಣಕುಮಾರ್ ದೊಡ್ಡಮನಿ, ರಾಜೇಂದ್ರ ಸಾತರಕರ, ಮಲ್ಲಿಕಾರ್ಜುನ್ ಅರಬಾವಿ ಹಾಗೂ ಚಾಲಕ ಸಚಿನ್ ರಾಮ್ ನಾಯಕ್ ಪಾಲ್ಗೊಂಡಿದ್ದರು.

ವರದಿ: ನಿಶಾ ಇರುವೈಲು

slider