ಶಿರ್ತಾಡಿ ಸಹಕಾರಿ ಸಂಘದ ನೂತನ ಕಚೇರಿ ಉದ್ಘಾಟನೆ: ಸ್ವಂತ ಕಟ್ಟಡ ನಿರ್ಮಾಣಕ್ಕೆ ಎಸ್‌ಸಿಡಿಸಿಸಿ ಬ್ಯಾಂಕ್‌ನಿಂದ 10 ಲಕ್ಷ ರೂ. ಅನುದಾನ ಘೋಷಣೆ

BIDIRE NEWS

ಮೂಡುಬಿದಿರೆ: ಸ್ಥಳೀಯ ರೈತರ ಆರ್ಥಿಕ ಶಕ್ತಿಯಾಗಿ ಮೂಡಿಬಂದಿರುವ ಶಿರ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿಯು ಸೋಮವಾರ ಉದ್ಘಾಟನೆಗೊಂಡಿತು. 


ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ನೂತನ ಕಚೇರಿಯನ್ನು ಉದ್ಘಾಟಿಸಿ, ಸಂಘದ ಅಭಿವೃದ್ಧಿಗೆ ಬ್ಯಾಂಕ್ ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂಬ ಭರವಸೆ ನೀಡಿದರು.

ಉದ್ಘಾಟನೆಯ ಬಳಿಕ ಮಾತನಾಡಿದ ಡಾ. ರಾಜೇಂದ್ರ ಕುಮಾರ್ ಅವರು, "ಕಲ್ಲಬೆಟ್ಟು ಸಹಕಾರಿ ಸಂಘದಿಂದ ವಿಭಜನೆಗೊಂಡು ಸ್ವತಂತ್ರ ಅಸ್ತಿತ್ವಕ್ಕೆ ಬಂದಿರುವ ಶಿರ್ತಾಡಿ ಸಂಘವು ಸ್ಥಳೀಯ ಜನರಿಗೆ ಹೆಚ್ಚು ಹತ್ತಿರವಾಗಿ ಸೇವೆ ನೀಡಲು ಸಾಧ್ಯವಾಗಲಿದೆ. ಈ ಭಾಗದ ಪ್ರತಿಯೊಬ್ಬ ರೈತನಿಗೂ ಕೃಷಿ ಸಾಲದ ಸೌಲಭ್ಯ ಸಿಗಬೇಕು. ಒಂದು ವೇಳೆ ಸಂಘಕ್ಕೆ ಸಾಲ ನೀಡಲು ಹಣದ ಕೊರತೆಯಾದಲ್ಲಿ, ಎಸ್‌ಸಿಡಿಸಿಸಿ ಬ್ಯಾಂಕ್ ತಕ್ಷಣವೇ ನೆರವಿಗೆ ಧಾವಿಸಲಿದೆ," ಎಂದರು.


ಸಂಘಕ್ಕೆ ಭರ್ಜರಿ ಕೊಡುಗೆ

ಸಂಘದ ಮೂಲಸೌಕರ್ಯದ ಬಗ್ಗೆ ಪ್ರಸ್ತಾಪಿಸಿದ ಅವರು, "ಈಗಾಗಲೇ ಪೀಠೋಪಕರಣಗಳಿಗಾಗಿ 5 ಲಕ್ಷ ರೂ. ಅನುದಾನ ನೀಡಲಾಗಿದೆ. ಸಂಘವು ಶೀಘ್ರದಲ್ಲೇ ಸ್ವಂತ ಕಟ್ಟಡ ಹೊಂದಬೇಕು. ಬರುವ ಗಣರಾಜ್ಯೋತ್ಸವದಂದು ಸ್ವಂತ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಲಿ. ಆ ಸಂದರ್ಭದಲ್ಲಿ ಬ್ಯಾಂಕ್ ವತಿಯಿಂದ 10 ಲಕ್ಷ ರೂ. ಆರ್ಥಿಕ ಸಹಾಯ ನೀಡಲಾಗುವುದು," ಎಂದು ಘೋಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ವಹಿಸಿದ್ದರು. ಸಂಘದ ವಿವಿಧ ಸೇವೆಗಳಿಗೆ ಗಣ್ಯರು ಚಾಲನೆ ನೀಡಿದರು:

 ಪಡಿತರ ವಿಭಾಗವನ್ನು ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್ ಉದ್ಘಾಟಿಸಿದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಠೇವಣಿ ಪತ್ರ ಬಿಡುಗಡೆಗೊಳಿಸಿದರು.

ಎಂಸಿಎಸ್ ಸೊಸೈಟಿ ಅಧ್ಯಕ್ಷ ಬಾಹುಬಲಿ ಪ್ರಸಾದ್ ಉಳಿತಾಯ ಖಾತೆ ಪುಸ್ತಕ ಹಸ್ತಾಂತರಿಸಿದರು. ಸಿಇಒ ಚಂದ್ರಶೇಖರ್ ಎಂ. ಸ್ವಸಹಾಯ ಸಂಘದ ಪುಸ್ತಕ ಹಸ್ತಾಂತರಿಸಲಾಯಿತು.ಸಂಪತ್ ಸಾಮ್ರಾಜ್ಯ ಅವರು 

ಇದೇ ಸಂದರ್ಭದಲ್ಲಿ ಸಹಕಾರಿ ರಂಗದ ಸಾಧಕ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹಾಗೂ ಶಿರ್ತಾಡಿ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ನವಮೈತ್ರಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ, ಹೊಸಬೆಟ್ಟು ಸಹಕಾರ ಸಂಘದ ಅಧ್ಯಕ್ಷ ರಾಜೇಶ್, ಪೆರಾಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಸತೀಶ್ ಕಾಶಿಪಟ್ಣ, ನೆಲ್ಲಿಕಾರು ಸಹಕಾರಿ ಸಂಘದ ಅಧ್ಯಕ್ಷ ಜಯವರ್ಮ ಜೈನ್, ಶಿರ್ತಾಡಿ ಗ್ರಾ.ಪಂ. ಅಧ್ಯಕ್ಷೆ ಆಗ್ನೆಸ್ ಡಿಸೋಜಾ, ಉಪಾಧ್ಯಕ್ಷ ಸಂತೋಷ್ ಕೋಟ್ಯಾನ್, ಸಂಘದ ಉಪಾಧ್ಯಕ್ಷ ಚಿಂತನ್ ಲೋಬೊ, ಸಿಇಒ ವಿಮಲಾಜಿ , ಸಂಘದ ನಿರ್ದೇಶಕರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ರಾಮ್ ಕುಮಾರ್ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು.

slider