ಮೂಡುಬಿದಿರೆ: ಶೂನ್ಯ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಮುಕ್ತ ಸಮಾಜದ ನಿರ್ಮಾಣದ ಕನಸಿಗೆ ಮೂಡುಬಿದಿರೆಯ ರೋಟರಿ ಕ್ಲಬ್ ಹಾಗೂ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆ ಶನಿವಾರ ಹೊಸ ಆಯಾಮ ನೀಡಿದೆ.
ಬೆಳುವಾಯಿ ಕೆಸರುಗದ್ದೆ ಮುಕ್ತಾನಂದ ಪ್ರೌಢಶಾಲೆಯಲ್ಲಿ ಕಾರ್ಯಾಚರಿಸುತ್ತಿರುವ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಆಯೋಜಿಸಲಾಗಿದ್ದ 'ಸ್ಪೂರ್ತಿ ಕಲಾ ಸಂಭ್ರಮ'ವು ಸಂಪೂರ್ಣ ಪರಿಸರ ಸ್ನೇಹಿ ಚಟುವಟಿಕೆಗಳಿಗೆ ವೇದಿಕೆಯಾಯಿತು. ರೋಟರಿ ಕ್ಲಬ್ ಅಧ್ಯಕ್ಷ ನಾಗರಾಜ್ ಹೆಗ್ಡೆಯವರ ಮುಂದಾಳತ್ವದಲ್ಲಿ, ಮಳಿಗೆದಾರರಿಗೆ ಹಾಗೂ ವರ್ತಕರಿಗೆ ಪರಿಸರ ಸ್ನೇಹಿ ವಸ್ತುಗಳನ್ನು ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.
ಪ್ಲಾಸ್ಟಿಕ್‌ಗೆ ಪರ್ಯಾಯ: ರೋಟರಿ ಕ್ಲಬ್ ಕೊಡುಗೆ
ಏಕಬಳಕೆಯ ಪ್ಲಾಸ್ಟಿಕ್ ಪ್ಲೇಟ್ ಹಾಗೂ ಕಪ್‌ಗಳ ಬದಲಿಗೆ ವರ್ತಕರು ರೋಟರಿ ಸಂಸ್ಥೆ ನೀಡಿದ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿದರು. ಈ ನೈಸರ್ಗಿಕ ವಸ್ತುಗಳ ಹೆಚ್ಚುವರಿ ವೆಚ್ಚವನ್ನು ರೋಟರಿ ಕ್ಲಬ್ ಭರಿಸುವ ಮೂಲಕ ವರ್ತಕರಿಗೆ ಆರ್ಥಿಕ ಹೊರೆಯಾಗದಂತೆ ನೋಡಿಕೊಂಡಿತು.
ಚುರುಮುರಿಗಾಗಿ 500 ಪರಿಸರ ಸ್ನೇಹಿ ಬೌಲ್‌ಗಳು, ಪಾನಿಪುರಿ ಹಾಗೂ ಸ್ವೀಟ್ ಕಾರ್ನ್: ತಲಾ 500 ಮತ್ತು 400 ಕಪ್‌ಗಳು, ರೈಸ್ ಐಟಂಗಾಗಿ 250 ಅಡಿಕೆ ತಟ್ಟೆ/ಪರಿಸರ ಸ್ನೇಹಿ ಪ್ಲೇಟ್‌ಗಳು, ಮರದಿಂದ ಮಾಡಿದ 1000 ಚಮಚಗಳು ಹಾಗೂ 200 ಮುಳ್ಳುಚಮಚಗಳನ್ನು ನೀಡಲಾಯಿತು. ಇವೆಲ್ಲವೂ ಜೈವಿಕ ವಿಘಟನೀಯ (Biodegradable) ವಸ್ತುಗಳಾಗಿದ್ದು, ಪರಿಸರ ರಕ್ಷಣೆಗೆ ಪೂರಕವಾಗಿವೆ.
"ಸ್ಪೂರ್ತಿ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿಗಾರ್ ಅವರ ತಂಡ ಪರಿಸರ ಸ್ನೇಹಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ನಮ್ಮ ಯೋಜನೆಗೆ ಹೆಚ್ಚಿನ ಬಲ ನೀಡಿದೆ. ವರ್ತಕರಿಂದಲೂ ಅದ್ಭುತ ಸ್ಪಂದನೆ ದೊರೆತಿದೆ," ಎಂದು ರೋಟರಿ ಅಧ್ಯಕ್ಷ ನಾಗರಾಜ್ ಹೆಗ್ಡೆ ತಿಳಿಸಿದರು.
ಚುರುಮುರಿ ವ್ಯಾಪಾರಿ ಗಣೇಶ್ ಪ್ರಭು ಮಾತನಾಡಿ, "ಗ್ರಾಹಕರು ಕೂಡ ಈ ಬದಲಾವಣೆಯನ್ನು ಮೆಚ್ಚಿಕೊಂಡಿದ್ದಾರೆ. ಪರಿಸರ ಸ್ನೇಹಿ ವಿಧಾನದಲ್ಲಿ ವ್ಯಾಪಾರ ಮಾಡುವುದು ನಮಗೂ ಖುಷಿ ನೀಡಿದೆ," ಎಂದರು.

