ಮೂಡುಬಿದಿರೆ: ಸ್ಪೂರ್ತಿ ಶಾಲೆಯಲ್ಲಿ ಕಲಾಸಂಭ್ರಮ: ಸ್ಪೂರ್ತಿರತ್ನ ಪ್ರಶಸ್ತಿ ಪ್ರದಾನ

BIDIRE NEWS

ಮೂಡುಬಿದಿರೆ: ಬೆಳುವಾಯಿ ಕೆಸರ್ ಗದ್ದೆಯಲ್ಲಿರುವ ಸ್ಪೂರ್ತಿ ವಿಶೇಷ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರದ ಕಲಾ ಸಂಭ್ರಮ- 2025 ಕಾರ್ಯಕ್ರಮ ಶನಿವಾರ ನಡೆಯಿತು. 



ಶಾಸಕ ಉಮಾನಾಥ ಕೋಟ್ಯಾನ್ ಎ. ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ, ವಿಶೇಷ ಸಾಮರ್ಥ್ಯದ ಮಕ್ಕಳಲ್ಲಿ ಪ್ರತಿಭೆಗಳಿವೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದುಕೊಂಡವರಿದ್ದಾರೆ. ಆದ್ದರಿಂದ ಹೆತ್ತವರು ದೃತಿಗೆಡದೆ ಸಮರ್ಥವಾಗಿ ಮಕ್ಕಳನ್ನು ಬೆಳೆಸಬೇಕು. ಸ್ಪೂರ್ತಿಯಂತಹ ಸಂಸ್ಥೆಗಳು ವಿಶೇಷ ಮಕ್ಕಳನ್ನು ಸೇರಿಸಿಕೊಂಡು ಅವರಿಗೆ ಕ್ರೀಡೆ, ಆರೋಗ್ಯ, ತರಬೇತಿಗಳನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಂದೆ ತರುವಂತಹ ಕೆಲಸಗಳನ್ನು ಮಾಡುತ್ತಿರುವುದರಿಂದ ನಾವು ಪ್ರೋತ್ಸಾಹಿಸಬೇಕೆಂದರು. 

ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್‌ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಅಧ್ಯಕ್ಷತೆವಹಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿಶೇಷ ಮಕ್ಕಳಿಗಾಗಿ ವಿಶಿಷ್ಟ ಯೋಜನೆಗಳನ್ನು ರೂಪಿಸುತ್ತಿರುವ ಸ್ಪೂರ್ತಿ ಶಾಲೆಯ ಪ್ರತಿಯೊಂದು ಹಂತದಲ್ಲೂ ನಾನು ಜೊತೆಗಿರುವೆ. ಸರ್ಕಾರ ಮಟ್ಟದಲ್ಲಿ ಆಗುವ ಕೆಲಸಗಳಿಗೆ ಸಾಥ್ ನೀಡುತ್ತೇನೆ ಎಂದರು. 

ಸ್ಪೂರ್ತಿರತ್ನ ಪ್ರಶಸ್ತಿ:  ಹಿರಿಯ ಪತ್ರಕರ್ತ ಧನಂಜಯ ಮೂಡುಬಿದಿರೆ ಅವರಿಗೆ ಸ್ಪೂರ್ತಿರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರ್ಜುನ್ ಭಂಡಾರ್ ಕರ್ ಅವರನ್ನು ದಂಪತಿ ಸಹಿತ ಸನ್ಮಾನಿಸಲಾಯಿತು. ರಾಷ್ಟçಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಶಯನ್, ಸಹಳಾ ಮತ್ತು ರಂಜಿತ್ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾವರ್ಧಕ ಸಂಘದ ಹಿರಿಯರಾದ ವಸಂತ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಲತಾ ಸುರೇಶ್ ಹಾಗೂ ಕಲೆ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿರುವ ಶಾಲೆಯ ಶಿಕ್ಷಕಿ ಸುಚಿತ್ರಾ ಅವರನ್ನು ಗೌರವಿಸಲಾಯಿತು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಧನಂಜಯ ಮೂಡುಬಿದಿರೆ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆ ಸಮಿತಿಗೆ ಗ್ರಾಮೀಣ ಮಟ್ಟದ ಪತ್ರಕರ್ತರನ್ನು ಸೇರಿಸಿಕೊಳ್ಳಬೇಕು., ರಾಜ್ಯೋತ್ಸವ ಪ್ರಶಸ್ತಿಗೆ ನೀಡಲಾಗುವ ಮಾನದಂಡವನ್ನು ಶೇ. 10ರಷ್ಟಾದರೂ ಜಿಲ್ಲಾ ಪ್ರಶಸ್ತಿಗೆ ನೀಡಿದರೆ ಉತ್ತಮ ಎಂದರು. 

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ., ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಿ ಅಮರಶ್ರೀ ಶೆಟ್ಟಿ, ಮುಂಬಯಿ ಪದ್ಮಶಾಲಿ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಲೀಲಾಧರ ಬಿ. ಶೆಟ್ಟಿಗಾರ್, ಉದ್ಯಮಿಗಳಾದ ಅಬುಲಾಲ ಪುತ್ತಿಗೆ, ಸಿಎಚ್ ಅಬ್ದುಲ್ ಗಪೂರ್, ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಂಡಿಗ ರತ್ನಾಕರ ಶೆಟ್ಟಿ, ಸಂಚಾಲಕ ರಾಜೇಶ್ ಸುವರ್ಣ, ಹೆಲ್ಪಿಂಗ್ ಇಸ್ರೇಲ್ ತಂಡದ ಸುನಿಲ್ ಮೆಂಡೋನ್ಸಾ ಮತ್ತಿತರರು ಉಪಸ್ಥಿತರಿದ್ದರು. 

ಶಾಲೆಯ ಸಂಸ್ಥಾಪಕ ಪ್ರಕಾಶ್ ಶೆಟ್ಟಿಗಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕಿ ಶರ್ಮಿಳಾ ವಾಸ್ ವರದಿ ವಾಚಿಸಿದರು. ಸಂಸ್ಥೆಯ ಪ್ರಮುಖರಾದ ಉಷಾಲತಾ ಸಹಕರಿಸಿದರು. ಸುಚಿತ್ರ ಪೂಜಾರಿ ಸನ್ಮಾನಿತರ ಪತ್ರ ವಾಚಿಸಿ ವಂದಿಸಿದರು. 

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಭಾ ಕಾರ್ಯಕ್ರಮದ ಮೊದಲು ಸ್ವಪ್ತಸ್ವರ ಮೆಲೋಡಿಸ್ ನ ಉಮೇಶ್ ಕೋಟ್ಯಾನ್ ಬಳಗ ವಾಮದಪದವು ಇವರಿಂದ ಉದಯಗಾನ ಸಂಭ್ರಮ, ಮಧ್ಯಾಹ್ನ ವಾಯ್ಸ್ ಆಫ್ ಆರಾಧನ ತಂಡದ ಮಕ್ಕಳಿಂದ ಹಾಗೂ ಸ್ಫೂರ್ತಿ ಶಾಲಾ ವಿಶೇಷ ಚೇತನ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಸಂಭ್ರಮ ನಡೆಯಿತು. ಸಾಯಂಕಾಲ ಟ್ವಿಸ್ಟರ್ ಡ್ಯಾನ್ಸ್ ಅಕಾಡೆಮಿ ಮೂಡುಬಿದಿರೆ ಹಾಗೂ ಎಂ.ಜೆ ಸ್ಟೆಪ್ ಆಫ್ ಡ್ಯಾನ್ಸ್ ಸ್ಟುಡಿಯೋ ಮೂಡುಬಿದಿರೆ ಇವರಿಂದ ನೃತ್ಯ ಸಂಭ್ರಮ, ಸಿಂಧೂರ ಕಲಾವಿದೆರ್ ಕಾರ್ಲ ಇವರಿಂದ ತುಳು ಹಾಸ್ಯಮಯ ನಾಟಕ ಪನೊಡಿತ್ತ್ಂಡ್ ಸ್ವಾರಿ ಪ್ರದರ್ಶನಗೊಂಡಿತು.


slider