ಕತ್ತಲಲ್ಲಿದ್ದ ಬದುಕಿಗೆ ‘ಹ್ಯೂಮ್ಯಾನಿಟಿ’ ಬೆಳಕು: ಕ್ಯಾನ್ಸರ್ ಕಾಡಿದ ಪಾಲಡ್ಕದ ಕುಟುಂಬಕ್ಕೆ ಮಾನವೀಯತೆಯ ಮನೆ

BIDIRE NEWS

ಮೂಡುಬಿದಿರೆ: ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡ ಕುಟುಂಬವೊಂದಕ್ಕೆ ‘ಹ್ಯೂಮ್ಯಾನಿಟಿ’ ಸಂಸ್ಥೆ ಮಾನವೀಯತೆಯ ಮಹತ್ವದ ಮಾದರಿಯನ್ನು ಕಟ್ಟಿಕೊಟ್ಟಿದೆ. ಆರ್ಥಿಕ ಸಂಕಷ್ಟ ಹಾಗೂ ಅನಾರೋಗ್ಯದ ನಡುವೆಯೇ ಜೀವನ ನಡೆಸುತ್ತಿದ್ದ ಕುಟುಂಬಕ್ಕೆ ಇದೀಗ ಭದ್ರ ನೆಲೆ ಸಿಗುವ ಆಶಾಭಾವನೆ ಮೂಡಿದೆ.


ಪಾಲಡ್ಕ ಗ್ರಾ.ಪಂ ವ್ಯಾಪ್ತಿಯ ಕಡಂದಲೆ ಗ್ರಾಮದ ಜನತಾ ನಗರದಲ್ಲಿನ ಅಶೋಕ್ ಆಚಾರ್ ಕುಟುಂಬಕ್ಕೆ ‘ಹ್ಯೂಮ್ಯಾನಿಟಿ’ ಸಂಸ್ಥೆ ನೆರವಿನ ಹಸ್ತ ಚಾಚಿದೆ. ಸಂಸ್ಥೆಯ ಮೂಲಕ ಸುಮಾರು ರೂ. 8 ಲಕ್ಷ ವೆಚ್ಚದಲ್ಲಿ ನೂತನ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ.


ಕನಸಾಗಿದ್ದ ಮನೆ, ಕಾಡಿದ ಅನಾರೋಗ್ಯ

ಜನತಾ ನಗರದ ನಿವಾಸಿ ಅಶೋಕ್ ಆಚಾರ್ ಕೂಲಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದರು. ಇಬ್ಬರು ಹೆಣ್ಣುಮಕ್ಕಳಿಗೆ ಸಣ್ಣದಾದರೂ ಸುಂದರವಾದ ಮನೆ ಕಟ್ಟಬೇಕು ಎಂಬುದು ಅವರ ಜೀವನದ ದೊಡ್ಡ ಕನಸಾಗಿತ್ತು.

ಆದರೆ ಎರಡು ವರ್ಷಗಳ ಹಿಂದೆ ಪತ್ನಿ ಮೀನಾಕ್ಷಿ ಆಚಾರ್ ಅವರಿಗೆ ಕ್ಯಾನ್ಸರ್ ಪತ್ತೆಯಾಗಿದ್ದು, ಕುಟುಂಬದ ನೆಮ್ಮದಿಯನ್ನು ಕಸಿದುಕೊಂಡಿತು. ಮನೆ ಕಟ್ಟಲು ಉಳಿಸಿಕೊಂಡಿದ್ದ ಅಲ್ಪ ಉಳಿತಾಯವೆಲ್ಲ ಚಿಕಿತ್ಸೆಗಾಗಿ ಖರ್ಚಾಯಿತು. ಜೊತೆಗೆ ಸಾಲದ ಹೊರೆ ಕೂಡ ಹೆಚ್ಚಾಯಿತು.


ಮಾನವೀಯ ಮನಸ್ಸಿನ ಕೊಂಡಿ

ಕುಟುಂಬದ ದುಸ್ಥಿತಿಯನ್ನು ಗಮನಿಸಿದ ಕಡಂದಲೆ ವಿದ್ಯಾಗಿರಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಬೆನೆಡಿಕ್ಟ್ ದಾಂತೀಸ್ ಅವರು ನೆರವಿಗೆ ಮುಂದಾದರು. ಕುಟುಂಬದ ಸಂಕಷ್ಟವನ್ನು ಮನಗಂಡು ‘ಹ್ಯೂಮ್ಯಾನಿಟಿ’ ಸಂಸ್ಥೆಯ ಸಂಸ್ಥಾಪಕ ರೋಷನ್ ಬೆಳ್ಮಣ್ ಅವರನ್ನು ಸಂಪರ್ಕಿಸಿ ಮನೆ ನಿರ್ಮಾಣಕ್ಕೆ ಸಹಾಯ ಮಾಡುವಂತೆ ಮನವಿ ಮಾಡಿದರು.


ಹ್ಯೂಮ್ಯಾನಿಟಿಯಿಂದಲೇ ರೂ.5 ಲಕ್ಷ ನೆರವು

ಮನೆ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಒಟ್ಟು ವೆಚ್ಚದ ಪೈಕಿ ರೂ.5 ಲಕ್ಷ ಮೊತ್ತವನ್ನು ಹ್ಯೂಮ್ಯಾನಿಟಿ ಸಂಸ್ಥೆಯೇ ಭರಿಸಿದೆ. ಉಳಿದ ರೂ.3 ಲಕ್ಷ ಹಾಗೂ ಕಟ್ಟಡ ಸಾಮಗ್ರಿಗಳನ್ನು ದಾನಿಗಳ ಮೂಲಕ ಸಂಗ್ರಹಿಸುವ ಜವಾಬ್ದಾರಿಯನ್ನು ಸ್ಥಳೀಯ ಸಮಾಜಸೇವಕ ಜಗದೀಶ್ ಪೂಜಾರಿ (ಪೂಪಾಡಿಕಲ್ಲು) ವಹಿಸಿಕೊಂಡಿದ್ದಾರೆ.


ಅನಾರೋಗ್ಯದ ಸಮಯದಲ್ಲೂ ನೆರವಿನ ಕೈ

ಮೀನಾಕ್ಷಿ ಆಚಾರ್ ಅವರು ಕ್ಯಾನ್ಸರ್‌ನಿಂದ ತೀವ್ರವಾಗಿ ಬಳಲುತ್ತಿದ್ದ ಸಂದರ್ಭದಲ್ಲಿ ಕೂಡ ಜಗದೀಶ್ ಪೂಜಾರಿ ಅವರು ಸಾಮಾಜಿಕ ಜಾಲತಾಣ ಹಾಗೂ ದಾನಿಗಳ ಮೂಲಕ ಹಣ ಸಂಗ್ರಹಿಸಿ ಚಿಕಿತ್ಸೆಗೆ ನೆರವಾದರು. ಇದರ ಫಲವಾಗಿ ಮೀನಾಕ್ಷಿ ಅವರು ಸಮಯಕ್ಕೆ ಚಿಕಿತ್ಸೆ ಪಡೆದು ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾರೆ.


“ಕತ್ತಲೆಯಲ್ಲಿದ್ದ ನಮಗೆ ಬೆಳಕು ತಂದರು”

“ಹೆಂಡತಿಯ ಅನಾರೋಗ್ಯದಿಂದ ಕೆಲಸಕ್ಕೂ ಹೋಗಲಾಗದೆ ಸಂಪೂರ್ಣ ಕತ್ತಲಲ್ಲಿ ಸಿಲುಕಿದ್ದ ನಮಗೆ ಬೆನೆಡಿಕ್ಟ್, ಜಗದೀಶ್ ಪೂಜಾರಿ ಹಾಗೂ ಹ್ಯೂಮ್ಯಾನಿಟಿ ಸಂಸ್ಥೆಯ ರೋಷನ್ ಬೆಳ್ಮಣ್ ಅವರು ಬೆಳಕಾಗಿದ್ದಾರೆ. ಇವರಿಗೆ ನಾವು ಸದಾ ಕೃತಜ್ಞರು.”
— ಅಶೋಕ್ ಆಚಾರ್


ಮಾನವೀಯತೆಗೆ ಮಾದರಿ ಕಾರ್ಯ

“ಕುಟುಂಬದ ಆರ್ಥಿಕ ಹಾಗೂ ಆರೋಗ್ಯ ಸಂಬಂಧಿತ ಪರಿಸ್ಥಿತಿಯನ್ನು ಕಂಡಾಗ ಮನಸ್ಸು ತುಂಬ ನೋವಾಯಿತು. ಅವರಿಗೆ ಭದ್ರತೆ ನೀಡಬೇಕೆಂಬ ಉದ್ದೇಶದಿಂದ ಮನೆ ನಿರ್ಮಾಣಕ್ಕೆ ಮುಂದಾದೆವು. ಜಗದೀಶ್ ಪೂಜಾರಿ ಅವರು ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿರುವುದರಿಂದ ಕಾರ್ಯ ಸುಗಮವಾಗಿ ನಡೆಯುತ್ತಿದೆ.”
— ರೋಷನ್ ಬೆಳ್ಮಣ್, ಸಂಸ್ಥಾಪಕ, ಹ್ಯೂಮ್ಯಾನಿಟಿ ಸಂಸ್ಥೆ


ಕುಟುಂಬಕ್ಕೆ ನೆರವು ನೀಡುವವರು ಸ್ಕ್ಯಾನ್ ಮಾಡಿ




ವಿಶೇಷ ವರದಿ : ಯಶೋಧರ ವಿ. ಬಂಗೇರ 

slider