ಬೆದ್ರ ಯುವತಿ ಆತ್ಮಹತ್ಯೆ ಪ್ರಕರಣ: ಮದುವೆ ನಿರಾಕರಣೆ ಕಾರಣ- ಡೆತ್ ನೋಟ್ ಬರೆದಿಟ್ಟಿದ್ದ ಯುವತಿ

BIDIRE NEWS

ಮೂಡುಬಿದಿರೆ: ಗುರುಪುರದಲ್ಲಿ ಫಲ್ಗುಣಿ ನದಿಗೆ ಜಿಗಿದು ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಮದುವೆ ನಿರಾಕರಿಸಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಿಯಕರನನ್ನು ಬಜಪೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮಳಲಿ ತೆಂಕುಳಿಪಾಡಿ ಗ್ರಾಮದ ನಿವಾಸಿ ಮನೋಜ್ ಯಾನೆ ಮುರಳಿ ಪೂಜಾರಿ (21) ಬಂಧಿತ ಆರೋಪಿ. ಈತ ಗಂಜಿಮಠದ ಕೋಳಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು.

ಪ್ರಕರಣದ ಹಿನ್ನೆಲೆ:

ಮೂಡುಬಿದಿರೆಯ ನವ್ಯಾ ಮತ್ತು ಮನೋಜ್ ಅವರು ಇನ್‌ಸ್ಟಾಗ್ರಾಂ  ಮೂಲಕ ಪರಿಚಯವಾಗಿ ಕಳೆದ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಮನೋಜ್ ಆಕೆಯನ್ನು ವಿವಾಹವಾಗುವುದಾಗಿ ಭರವಸೆ ನೀಡಿದ್ದನು. ಆದರೆ ಇತ್ತೀಚಿನ ದಿನಗಳಲ್ಲಿ ಆಕೆಯಿಂದ ದೂರವಾಗಲು ಯತ್ನಿಸಿ, ಮದುವೆಗೆ ನಿರಾಕರಿಸಿದ್ದನು ಎಂದು ತಿಳಿದುಬಂದಿದೆ. ಇದರಿಂದ ಮನನೊಂದ ನವ್ಯಾ ಸೋಮವಾರ ಫಲ್ಗುಣಿ ನದಿಯ ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಡೆತ್‌ನೋಟ್ ಸುಳಿವು: 

ಆತ್ಮಹತ್ಯೆಗೂ ಮುನ್ನ ನವ್ಯಾ ಬರೆದಿದ್ದ ಡೆತ್‌ನೋಟ್ ಪೊಲೀಸರಿಗೆ ಲಭ್ಯವಾಗಿದ್ದು, ಅದರಲ್ಲಿ ತನ್ನ ಸಾವಿಗೆ ಮನೋಜ್ ಕಾರಣ ಎಂದು ಉಲ್ಲೇಖಿಸಿದ್ದಳು ಎನ್ನಲಾಗಿದೆ. ಘಟನೆಯ ವೇಳೆ ನವ್ಯಾ ಜೊತೆಗಿದ್ದ ಸ್ನೇಹಿತೆ ಕವನಾ ಎಂಬಾಕೆಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಪ್ರೇಮ ವೈಫಲ್ಯದ ವಿಷಯ ಬೆಳಕಿಗೆ ಬಂದಿದೆ. ಈ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಮನೋಜ್ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

slider