ಮೂಡುಬಿದಿರೆ: ಕೊಡಂಗಲ್ಲು ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವವು ಮಾರ್ಚ್ 6 ರಿಂದ 8 ರವರೆಗೆ ಜರುಗಲಿದ್ದು, ಇದರ ಯಶಸ್ವಿ ನಿರ್ವಹಣೆಗಾಗಿ ಪೂರ್ವಭಾವಿ ಸಭೆಯನ್ನು ಜನವರಿ 4ರಂದು ದೇವಸ್ಥಾನದ ವಠಾರದಲ್ಲಿರುವ ರಾಣೆಯಾರ್ ಸಮುದಾಯ ಭವನದಲ್ಲಿ ನಡೆಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಸುರೇಶ್ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಸಭೆಯಲ್ಲಿ ಬ್ರಹ್ಮಕಲಶೋತ್ಸವದ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.
ಮಾ. 6: ಸಂಜೆ 4 ಗಂಟೆಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಕೊಡಂಗಲ್ಲು ಮಾರಿಗುಡಿಯವರೆಗೆ ಅತ್ಯಂತ ವೈಭವದ 'ಹಸಿರು ಹೊರೆಕಾಣಿಕೆ' ಮೆರವಣಿಗೆ ನಡೆಯಲಿದೆ.ಮಾ. 7: ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಈ ಸಂದರ್ಭದಲ್ಲಿ ಪ್ರಾಂತದ ಗ್ರಾಮದ ಎಲ್ಲಾ ದೇವಸ್ಥಾನಗಳ ಮುಖ್ಯಸ್ಥರು ಉಪಸ್ಥಿತರಿರುವರು. ಮಾ. 8: ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನೆರವೇರಲಿದೆ. ಅಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ ಎಂದು ಸುರೇಶ್ ಕೋಟ್ಯಾನ್ ಪ್ರಕಟಿಸಿದರು.
ಭಕ್ತಿಪೂರ್ವಕ ಸಹಕಾರಕ್ಕೆ ಕರೆ:
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶಿವಪ್ರಸಾದ್ ಹೆಗ್ಡೆ ಅವರು ಮಾತನಾಡಿ, "ಧಾರ್ಮಿಕ ವಿಧಿವಿಧಾನಗಳಿಗೆ ಯಾವುದೇ ಚ್ಯುತಿ ಬಾರದಂತೆ ಅತ್ಯಂತ ಭಕ್ತಿ-ಶ್ರದ್ಧೆಯಿಂದ ಕಾರ್ಯಕ್ರಮವನ್ನು ನಡೆಸಿಕೊಡಲು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು" ಎಂದು ವಿನಂತಿಸಿದರು.
ಸಭೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ದೇಜು, ಕಾರ್ಯದರ್ಶಿ ಸಂದೀಪ್, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿಗಳಾದ ಬೆಳುವಾಯಿ ಸೀತಾರಾಮ ಆಚಾರ್ಯ, ಅಮರ್ ಕೋಟೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

