ಮೂಡುಬಿದಿರೆ: ಜೈನಕಾಶಿ ಮೂಡುಬಿದಿರೆಯ ಅತಿಶಯ ಕ್ಷೇತ್ರ ಶ್ರೀ ಹಿರೇ ಅಮ್ಮನವರ ಬಸದಿಯಲ್ಲಿ ವಿಶ್ವಾವಸು ನಾಮ ಸಂವತ್ಸರದ ವಾರ್ಷಿಕೋತ್ಸವ ಹಾಗೂ ಶ್ರೀ ಮನ್ಮಹಾರಥೋತ್ಸವವು 2026ರ ಜನವರಿ 5 ರಿಂದ 11ರವರೆಗೆ ಜರುಗಲಿದೆ.
ಜನವರಿ 5ರಂದು ಮುಂಜಾನೆ ವಿಮಾನ ಶುದ್ಧಿ ಹಾಗೂ ಕುಂಭ ಲಗ್ನದಲ್ಲಿ ಧ್ವಜಾರೋಹಣ ನೆರವೇರಿರುವ ಮೂಲಕ ಉತ್ಸವಕ್ಕೆ ಚಾಲನೆ ಸಿಕ್ಕಿದೆ. ಜನವರಿ 6 ರಿಂದ 9ರ ವರೆಗೆ ಪ್ರತಿದಿನ ಬೆಳಿಗ್ಗೆ 8:00ಕ್ಕೆ ಮತ್ತು ರಾತ್ರಿ 7:00ಕ್ಕೆ ಪಂಚಾಮೃತ ಅಭಿಷೇಕ, ಧ್ವಜ ಪೂಜೆ ಹಾಗೂ ಬಲಿ ಪೂಜೆಗಳು ನಿರಂತರವಾಗಿ ನಡೆಯಲಿವೆ.ಜನವರಿ 6ರಂದು ಬೆಳಿಗ್ಗೆ 9:00 ಗಂಟೆಗೆ ಶ್ರೀ ಬ್ರಹ್ಮಯಕ್ಷ ಆರಾಧನೆ ನಡೆಯಲಿದೆ. ಜನವರಿ 7ರಂದು ಬೆಳಿಗ್ಗೆ 9:00 ಗಂಟೆಗೆ ನವಗ್ರಹ ಶಾಂತಿ ಪೂಜೆ ಹಮ್ಮಿಕೊಳ್ಳಲಾಗಿದೆ.ಜನವರಿ 8ರಂದು ಬೆಳಿಗ್ಗೆ 9:30ಕ್ಕೆ ಕಲಿಕುಂಡ ಯಂತ್ರಾರಾಧನೆ ನೆರವೇರಲಿದೆ. ಜನವರಿ 9ರಂದು ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಕೆಯಾಗಲಿದೆ. ಬೆಳಿಗ್ಗೆ 9:00ಕ್ಕೆ ಆರಾಧನೆ, ಮಧ್ಯಾಹ್ನ 2:00ಕ್ಕೆ ಕುಂಕುಮಾರ್ಚನೆ, ಸಂಗೀತ ಪೂಜೆ ಹಾಗೂ ಉಯ್ಯಾಲೆ ಸೇವೆ ನಡೆಯಲಿದೆ. ರಾತ್ರಿ ಶ್ರೀ ಪದ್ಮಾವತಿ ಅಮ್ಮನವರ ವೈಭವದ ಪುರವಿಹಾರ ಜರುಗಲಿದೆ.
ಸಾಂಸ್ಕೃತಿಕ ಸೌರಭ: ಜಿನ ಭಜನೆ
ಪ್ರತಿದಿನ ಸಂಜೆ 6:30 ರಿಂದ ವಿವಿಧ ಭಜನಾ ತಂಡಗಳಿಂದ 'ಜಿನ ಭಜನೆ' ಕಾರ್ಯಕ್ರಮ ಆಯೋಜಿಸಲಾಗಿದೆ. ಸನ್ನತಿ ಮಕ್ಕಳ ತಂಡ, ಪಾರ್ಶ್ವನಾಥ ತಂಡ, ಮಹಾವೀರ ತಂಡ ಬೆಟ್ಟೇರಿ ಸೇರಿದಂತೆ ಅನೇಕ ಸ್ಥಳೀಯ ತಂಡಗಳು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಲಿವೆ.
ಪುರವಿಹಾರ, ಕಟ್ಟೆ ಪೂಜೆ
ಜನೆವರಿ 9ರಂದು ನಡೆಯುವ ಪುರವಿಹಾರದ ಸಂದರ್ಭದಲ್ಲಿ ಚೌಟರ ಅರಮನೆ ರಾಜಾಂಗಣ, ಕ್ಷೇತ್ರಪಾಲ ಕೊಂಡೆ ಬೀದಿ ಹಾಗೂ ವಸಂತ ಕಟ್ಟೆಗಳಲ್ಲಿ ವಿಶೇಷ ಕಟ್ಟೆ ಪೂಜೆಗಳು ನೆರವೇರಲಿವೆ. ಬಸದಿಯ ವಸಂತ ಮಂಟಪದಲ್ಲಿ ಶ್ರೀ ಪದ್ಮಾವತಿ ದೇವಿಗೆ ಶೋಡಷೋಪಚಾರ ಸಹಿತ ಉಯ್ಯಾಲೆ ಸೇವೆ ನಡೆಯಲಿದೆ.
ಜನವರಿ 10ರ ಶನಿವಾರ ಮಧ್ಯಾಹ್ನ 12:25ಕ್ಕೆ ಸರಿಯಾಗಿ ಅಭಿಜಿನ್ ಲಗ್ನದಲ್ಲಿ ಶ್ರೀ ಶಾಂತಿನಾಥ ಸ್ವಾಮಿ ಹಾಗೂ ಶ್ರೀ ಪದ್ಮಾವತೀ ದೇವಿ ಅಮ್ಮನವರ ಮಹಾ ರಥಾರೋಹಣ ಜರುಗಲಿದೆ. ಈ ಸಂದರ್ಭದಲ್ಲಿ ಹೊಂಬುಜ ಜೈನ ಮಠದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ದೇವರು ದೇವಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳ ವತಿಯಿಂದ ಸಂಘ ಸಂತರ್ಪಣೆ ನಡೆಯಲಿದೆ.ಅಂದು ರಾತ್ರಿ 9 ಗಂಟೆಗೆ ಶ್ರೀ ಮನ್ಮಹಾರಥೋತ್ಸವ ಹಾಗೂ ಪದ್ಮಾವತಿ ಅಮ್ಮನವರ ವಿಶೇಷ ಬಲಿ ಉತ್ಸವ ನಡೆಯಲಿದೆ. ಜನವರಿ 11ರಂದು ಓಕುಳಿ ಮತ್ತು ಧ್ವಜಾವರೋಹಣದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದ್ದು, ಅಂದು ರಾತ್ರಿ ರಕ್ತೇಶ್ವರಿ ಸನ್ನಿಧಿಯಲ್ಲಿ ನೇಮೋತ್ಸವ ನಡೆಯಲಿದೆ. ಉತ್ಸವದ ಅಂಗವಾಗಿ ಪ್ರತಿ ದಿನ ಧಾರ್ಮಿಕ ವಿಧಿ ವಿಧಾನಗಳು, ಜಿನ ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ ಎಂದು ಬಸದಿಯ ಆಡಳಿತದಾರ ಭಾಸ್ಕರ್ ಕಟ್ಟೆಮಾರ್ ತಿಳಿಸಿದ್ದಾರೆ.

