ಮೂಡುಬಿದಿರೆ: ಕರ್ನಾಟಕ ರಾಜ್ಯ ರೈತ ಸಂಘದ ಮಾರ್ಪಾಡಿ ರೈತ ಘಟಕದ ಆಶ್ರಯದಲ್ಲಿ ಕೃಷಿ ಸಂಸ್ಕೃತಿಯನ್ನು ಪಸರಿಸುವ ಉದ್ದೇಶದೊಂದಿಗೆ 'ಕೃಷಿ-ತುಳುವೆರೆ ಖುಷಿ' ಕಾರ್ಯಕ್ರಮವು ಶನಿವಾರ ಕಲ್ಲಬೆಟ್ಟು ನಡ್ಯೋಡಿ ದೇವಸ್ಥಾನದ ಆವರಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿದ, ರೈತನ ಬದುಕು ಸವಾಲುಗಳಿಂದ ಕೂಡಿದ್ದರೂ, ಆತ ತನ್ನ ಬೆವರಿನಿಂದ ಅನ್ನ ನೀಡುವ ಶ್ರೇಷ್ಠ ಕೆಲಸ ಮಾಡುತ್ತಾನೆ. ಮಾರ್ಪಾಡಿ ಘಟಕವು ಸ್ವ-ಸಹಾಯ ಸಂಘಗಳ ಮೂಲಕ ಒಂದು ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಾಧಕರಿಗೆ ಗೌರವ: ಇದೇ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತೆ ಉಷಾಲತಾ, ಹಿರಿಯ ಕೃಷಿಕರಾದ ಬಾಬು ಮಡಿವಾಳ, ಸುನಂದಮ್ಮ, ಹಾಗೂ ಕೃಷಿ ಕಾರ್ಮಿಕರಾದ ಹಾಮದ್, ಲೀಲಾ ಓಬಯ್ಯ ಪೂಜಾರಿ, ಅಪ್ಪಿ ಪೂಜಾರ್ತಿ ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ತ್ರಿಷಾ ಶೆಟ್ಟಿ, ಖುಷಿ ಯು. ಜೈನ್, ಸುಧನ್ ಆರ್.ಎಸ್., ಮತ್ತು ಸ್ವಸ್ತಿಕ್ ಎನ್. ಶೆಟ್ಟಿ ಅವರನ್ನು ಗೌರವಿಸಲಾಯಿತು.
ಘಟಕದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದರು.
ಉದ್ಯಮಿ ಶ್ರೀಪತಿ ಭಟ್, ಸುಜೀರ್ ಗುತ್ತು ಐತಪ್ಪ ಆಳ್ವ, ತಿಮ್ಮಯ್ಯ ಶೆಟ್ಟಿ, ಎಂ.ಸಿ.ಎಸ್. ಬ್ಯಾಂಕ್ ಅಧಿಕಾರಿ ಚಂದ್ರಶೇಖರ ಎಂ., ಪುರಸಭಾ ಸದಸ್ಯೆ ಮಮತಾ ಆನಂದ್, ಕೋಟೆಬಾಗಿಲು ಶ್ರೀ ಮಹಮ್ಮಾಯಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ರಾಜೇಶ್ ಕೋಟೆಗಾರ್, ನಡ್ಯೋಡಿ ದೈವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಗೋಪಾಲ ಪೂಜಾರಿ, ಚೇತನಾ ರಾಜೇಂದ್ರ ಹೆಗ್ಡೆ, ಶುಭ ಹಾರೈಸಿದರು. ಗೌರವಾಧ್ಯಕ್ಷ ಮಹಮ್ಮದ್ ಹನೀಫ್ ಉಪಸ್ಥಿತರಿದ್ದರು.
ವಾಸುದೇವ ಆಚಾರ್ಯ ವರದಿ ವಾಚಿಸಿದರು. ಅಪರ್ಣಾ ಪ್ರಸನ್ನ ಹೆಗ್ಡೆ,ರೇಖಾ ಸುರೇಂದ್ರ ಶೆಟ್ಟಿ, ರೋಹಿಣಿ ಶೆಟ್ಟಿ, ದಿವ್ಯಾ ಸನ್ಮಾನ ಪತ್ರ ವಾಚಿಸಿದರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿ, ಸುಜಯ ಎ. ಜೈನ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಸಾಂಸ್ಕೃತಿಕ ವೈವಿಧ್ಯ ಹಾಗೂ ಮಣಿ ಕೋಟೆಬಾಗಿಲು ನಿರ್ದೇಶನದ 'ಓಂಕಾರ' ನಾಟಕ ಪ್ರದರ್ಶನಗೊಂಡಿತು.




