ರಾಷ್ಟ್ರಮಟ್ಟದ ನೆಟ್‌ಬಾಲ್‌ನಲ್ಲಿ ಜೈನ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ ಐತಿಹಾಸಿಕ ಸಾಧನೆ: ಕರ್ನಾಟಕ ತಂಡಕ್ಕೆ ಚಾಂಪಿಯನ್ ಪಟ್ಟ

BIDIRE NEWS

ಮೂಡುಬಿದಿರೆ: ಮಂಗಳೂರಿನ ಪಿಲಿಕುಳದಲ್ಲಿ ನಡೆದ ರಾಷ್ಟ್ರಮಟ್ಟದ ನೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಮೂಡುಬಿದಿರೆಯ ಜೈನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಪ್ರತಿಮ ಸಾಧನೆ ಮಾಡುವ ಮೂಲಕ ಕಾಲೇಜು ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ವಿದ್ಯಾರ್ಥಿನಿಯರ ಅಮೋಘ ಸಾಧನೆ:

ಡಿಸೆಂಬರ್ 23ರಿಂದ 28ರವರೆಗೆ ನಡೆದ ಈ ಪ್ರತಿಷ್ಠಿತ ಕೂಟದಲ್ಲಿ ದೇಶದ ಒಟ್ಟು 24 ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ತೀವ್ರ ಪೈಪೋಟಿಯ ನಡುವೆ ಕರ್ನಾಟಕ ರಾಜ್ಯದ ಬಾಲಕಿಯರ ತಂಡವು 'ರಾಷ್ಟ್ರೀಯ ಚಾಂಪಿಯನ್' ಆಗಿ ಹೊರಹೊಮ್ಮಿದೆ. ಈ ವಿಜೇತ ತಂಡದಲ್ಲಿ ಜೈನ ಪದವಿ ಪೂರ್ವ ಕಾಲೇಜಿನ ಮೂವರು ಪ್ರತಿಭಾನ್ವಿತ ವಿದ್ಯಾರ್ಥಿನಿಯರು ಆಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಅನ್ವಿತಾ (ವಾಣಿಜ್ಯ ವಿಭಾಗ), ಸುರಕ್ಷ (ವಾಣಿಜ್ಯ ವಿಭಾಗ)

ಸಿಂಚನಾ (ಕಲಾ ವಿಭಾಗ) ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದರು.


ಬಾಲಕರ ತಂಡಕ್ಕೆ ರನ್ನರ್‌ಅಪ್ ಗೌರವ:

ಇದೇ ಕೂಟದ ಬಾಲಕರ ವಿಭಾಗದಲ್ಲಿ ಕರ್ನಾಟಕ ತಂಡವು ದ್ವಿತೀಯ ಸ್ಥಾನ (ರನ್ನರ್‌ಅಪ್) ಗಳಿಸಿದ್ದು, ತಂಡದ ಸದಸ್ಯರಾಗಿ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ವೃಷಭ್ ಶೆಟ್ಟಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ರಾಷ್ಟ್ರಮಟ್ಟದಲ್ಲಿ ಮಿಂಚಿದ ಈ ನಾಲ್ವರು ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಸೂಕ್ತ ರೀತಿಯಲ್ಲಿ ಗೌರವಿಸಲಾಗುವುದು ಎಂದು ಕಾಲೇಜಿನ ಸಂಚಾಲಕರ ಕೆ. ಹೇಮರಾಜ್ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ವರ್ಗದವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

slider