ಮೂಡುಬಿದಿರೆ: ಇಲ್ಲಿನ Sky Paints ಸಂಸ್ಥೆಯ ವತಿಯಿಂದ ಜನವರಿ 11ರ ಭಾನುವಾರ ಸಂಜೆ 4:45ಕ್ಕೆ ಮೂಡುಬಿದಿರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ವಿಶೇಷ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅಂತರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ನಡೆಯಲಿರುವ "ತ್ರಿವಳಿ ವಾಯಲಿನ್ ವಾದನ" ಕಛೇರಿ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ ಎಂದು ಸಂಘಟಕ ಶೈಲೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಕಾಶವಾಣಿಯ 'ಉನ್ನತ' ಶ್ರೇಣಿಯ ಕಲಾವಿದರು ಹಾಗೂ ಕೇರಳ ಸಂಗೀತ ನಾಟಕ ಅಕಾಡೆಮಿಯ 'ಕಲಾಶ್ರೀ' ಪುರಸ್ಕೃತರಾದ ತಿರುವನಂತಪುರಂನ ಸಹೋದರ-ಸಹೋದರಿ ಜೋಡಿ ಎಸ್.ಆರ್. ಮಹಾದೇವಶರ್ಮ ಮತ್ತು ಎಸ್.ಆರ್. ರಾಜಶ್ರೀ ಅವರೊಂದಿಗೆ ಯುವ ಪ್ರತಿಭೆ ವೈದ್ಯನಾಥ ಶರ್ಮ ಅವರು ವಾಯಲಿನ್ ಕಛೇರಿ ನಡೆಸಿಕೊಡಲಿದ್ದಾರೆ. ಇವರಿಗೆ ಪಕ್ಕವಾದ್ಯಗಳಲ್ಲಿ ಡಾ. ಕೆ. ಜಯಕೃಷ್ಣನ್ (ತ್ರಿಚೂರು) ಮೃದಂಗದಲ್ಲಿ ಹಾಗೂ ಶ್ರೀ ವೆಲ್ಲಂತಂಜೂರು ಶ್ರೀಜಿತ್ ಘಟಂನಲ್ಲಿ ಸಹಕರಿಸಲಿದ್ದಾರೆ.
ಮೂಡುಬಿದಿರೆ ಜೈನಮಠದ ಪರಮ ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಗೌರವ ಉಪಸ್ಥಿತರಿರುವರು. ಸಂಗೀತಾಸಕ್ತರಿಗೆ ಕಾರ್ಯಕ್ರಮಕ್ಕೆ ಮುಕ್ತ ಪ್ರವೇಶವಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಯತಿರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಕಲಾವಿದರ ಪರಿಚಯ:
ಎಸ್.ಆರ್. ಮಹಾದೇವಶರ್ಮ ಮತ್ತು ಎಸ್.ಆರ್. ರಾಜಶ್ರೀ ಅವರು ಸಂಗೀತ ಲೋಕದ ಅಪ್ರತಿಮ ಪ್ರತಿಭೆಗಳು. ಹತ್ತನೇ ವಯಸ್ಸಿನಲ್ಲೇ ಕಛೇರಿ ಆರಂಭಿಸಿದ ಇವರು, ಅಮೆರಿಕಾ ಮತ್ತು ಯುರೋಪ್ ಸೇರಿದಂತೆ ವಿಶ್ವದಾದ್ಯಂತ ಪ್ರದರ್ಶನ ನೀಡಿದ್ದಾರೆ. ಖ್ಯಾತ ಗಾಯಕ ಡಾ. ಕೆ.ಜೆ. ಯೇಸುದಾಸ್ ಅವರೊಂದಿಗೆ ಅನೇಕ ಕಛೇರಿಗಳನ್ನು ನೀಡಿರುವ ಇವರು, ಸಂಸ್ಕೃತದಲ್ಲಿ ಸ್ವತಃ ಕೀರ್ತನೆಗಳನ್ನು ರಚಿಸಿದ್ದಾರೆ. ಇವರಿಗೆ ಅಮೆರಿಕದ "Outstanding Violin Duo" ಮತ್ತು ಪ್ರತಿಷ್ಠಿತ "ಚೆಂಬೈ ಪ್ರಶಸ್ತಿ" ಲಭಿಸಿದೆ.

