ಮೂಡುಬಿದಿರೆ:ಹರಿಹರ ಪುತ್ರ ಅಯ್ಯಪ್ಪನಿಗೆ ದೇಶಾದ್ಯಂತ ಲಕ್ಷಾಂತರ ಭಕ್ತರಿದ್ದು, ಕಠಿಣ ವ್ರತಾಚರಣೆ ಹಾಗೂ ನಿಯಮ ಪಾಲನೆಯ ಮೂಲಕ ಊರೂರಲ್ಲಿ ಧರ್ಮ ಜಾಗೃತಿಯ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಧರ್ಮ ಮತ್ತು ಸಂಸ್ಕೃತಿ ಉಳಿದರೆ ಮಾತ್ರ ದೇಶ ಉಳಿಯುತ್ತದೆ; ಅದರಿಂದ ನಾವೂ ಉಳಿಯುತ್ತೇವೆ ಎಂದು ಸಾಂದೀಪನಿ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರಿನ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಬೆಳುವಾಯಿ ಕುಕ್ಕುಡೇಲುವಿನ ಪುಟ್ಟ ಗ್ರಾಮದಲ್ಲಿ ಭಕ್ತಾದಿಗಳ ಸಹಕಾರದಿಂದ ಜೀರ್ಣೋದ್ಧಾರಗೊಂಡ ನೂತನ ಹರಿಹರ ಪುತ್ರ ಅಯ್ಯಪ್ಪ ಮಂದಿರವನ್ನು ಲೋಕಾರ್ಪಣೆಗೊಳಿಸಿ, ಧಾರ್ಮಿಕ ಸಮಾರಂಭದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಈ ಮಂದಿರವು ಧರ್ಮಜಾಗೃತಿ ಹಾಗೂ ಸಂಸ್ಕೃತಿಯ ಸಾನ್ನಿಧ್ಯವಾಗಿ ರೂಪುಗೊಂಡಿರುವುದು ಶ್ಲಾಘನೀಯ ಕಾರ್ಯವೆಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಮಾತನಾಡಿದ ಬನ್ನಡ್ಕ ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಅಧ್ಯಕ್ಷ ಎಂ. ದಯಾನಂದ ಪೈ ಅವರು, ಸುಮಾರು 40 ವರ್ಷಗಳ ಹಿಂದೆ ದಿವಂಗತ ಗೋಪಾಲ ಪೈ ಅವರು ತಮ್ಮ ಸ್ವಂತ ಪರಿಶ್ರಮ, ತ್ಯಾಗ ಹಾಗೂ ತಪಸ್ಸಿನ ಫಲವಾಗಿ ಈ ಅಯ್ಯಪ್ಪ ಮಂದಿರವನ್ನು ಸ್ಥಾಪಿಸಿದ್ದರು. ನಂತರ ಅವರ ಪುತ್ರ ಸುರೇಶ್ ಪೈ ಅವರ ನಿರಂತರ ಸೇವೆ, ಸಹಕಾರ ಹಾಗೂ ಭಕ್ತರ ಒಗ್ಗೂಡುವಿಕೆಯಿಂದ ಇಂದು ಮಂದಿರ ಜೀರ್ಣೋದ್ಧಾರಗೊಂಡು ಊರಪರವೂರ ಭಕ್ತರ ಶ್ರದ್ಧಾ ಕೇಂದ್ರವಾಗಿ ಕಂಗೊಳಿಸುತ್ತಿದೆ ಎಂದು ಹೇಳಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಬೆಳುವಾಯಿ ಸೋಮನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಮಿತಿಯ ಗೌರವಾಧ್ಯಕ್ಷ ಸುರೇಶ್ ಪೈ, ವಿಶ್ವ ಹಿಂದೂ ಪರಿಷತ್ ಮೂಡುಬಿದಿರೆ ಪ್ರಖಂಡದ ಕಾರ್ಯಾಧ್ಯಕ್ಷ ಶ್ಯಾಮ ಹೆಗ್ಡೆ, ಮರಾಠಿ ಸಮಾಜ ಸೇವಾ ಸಂಘ ಕುಕ್ಕುಡೇಲು ಸಂಚಾಲಕ ಬಿ. ಕೃಷ್ಣ ನಾಯ್ಕ, ಗಣೇಶ ಗುರುಸ್ವಾಮಿ, ಅಣ್ಣಿ ಬಿ. ಪೂಜಾರಿ ಉಪಸ್ಥಿತರಿದ್ದು ಶುಭಾಶಯ ಕೋರಿದರು.
ಮಂದಿರವನ್ನು ಅತ್ಯಂತ ಸುಂದರವಾಗಿ ನಿರ್ಮಿಸಿದ ಸುರಕ್ಷಾ ಕನ್ಸ್ಟ್ರಕ್ಷನ್‌ನ ಸುರೇಶ್ ಕುಮಾರ್ ಅವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು.
ಸೋಮನಾಥ ಕೋಟ್ಯಾನ್ ಸ್ವಾಗತಿಸಿ ಪ್ರಸ್ತಾವನೆ ಸಲ್ಲಿಸಿದರು.
ಬೆಳುವಾಯಿ ಭಾಸ್ಕರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ನಂತರ ಪಂಚ ಭಜನಾ ತಂಡಗಳಿಂದ ಪಂಚ ಭಜನಾ ಮಂಡಳಿ ಮಂಗಳೋತ್ಸವ ನಡೆಯಿತು.
ವರದಿ: ರಾಘವೇಂದ್ರ ಭಂಡಾರ್ಕರ್

