ತೆಂಕಮಿಜಾರು, ಬೆಳುವಾಯಿ ಗ್ರಾ.ಪಂ.ಗಳಿಗೆ ಎಂಎಲ್‌ಸಿ ಕಿಶೋರ್ ಕುಮಾರ್ ಭೇಟಿ

BIDIRE NEWS

ಮೂಡುಬಿದಿರೆ :ತಾಲೂಕಿನ ತೆಂಕಮಿಜಾರು ಹಾಗೂ ಬೆಳುವಾಯಿ ಗ್ರಾಮ ಪಂಚಾಯತ್‌ಗಳಿಗೆ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಅವರು ಮಂಗಳವಾರ ಭೇಟಿ ನೀಡಿ ಪಂಚಾಯತ್ ಆಡಳಿತ ವ್ಯವಸ್ಥೆ, ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಹಾಗೂ ಗ್ರಾಮೀಣ ಭಾಗದ ಪ್ರಮುಖ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ, 15ನೇ ಹಣಕಾಸು ಆಯೋಗದ ಅನುದಾನ, ಸ್ವಚ್ಛ ಭಾರತ ಮಿಷನ್ ಜಲಜೀವನ್ ಮಿಷನ್ ಹಾಗೂ ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚಿಸಿ ಮಾಹಿತಿ ಪಡೆದರು.

ಪಂಚಾಯತ್ ರಾಜ್ ಸಂಬಂಧಿತ ವಿಷಯಗಳಾದ ಕಟ್ಟಡ ಮತ್ತು ಭೂ ತೆರಿಗೆ ಸಂಗ್ರಹಣೆ, ವಾರ್ಡ್ ಹಾಗೂ ಗ್ರಾಮ ಸಭೆಗಳ ಆಯೋಜನೆ, ಗ್ರಾಮ ಪಂಚಾಯತ್ ಅಭಿವೃದ್ಧಿಯಲ್ಲಿ ಎದುರಾಗುತ್ತಿರುವ ಅಡಚಣೆಗಳು ಮತ್ತು ಉತ್ತಮ ಆಡಳಿತ ಕ್ರಮಗಳ ಕುರಿತು ಸದಸ್ಯರಿಂದ ವಿವರವಾಗಿ ಮಾಹಿತಿ ಸಂಗ್ರಹಿಸಿದರು.

ನರೇಗಾ ಹಾಗೂ 15ನೇ ಹಣಕಾಸು ಅನುದಾನದಡಿ ಕೈಗೊಳ್ಳಲಾದ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುವ ನೀರಿನ ಕೊರತೆ ಕುರಿತು ಸದಸ್ಯರ ಅಹವಾಲುಗಳನ್ನು ಆಲಿಸಿದರು.

ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ವಿನ್ಯಾಸ ಅನುಮೋದನೆ, ನಮೂನೆ 11ಎ, 11ಬಿ, ಸ್ವಾಧೀನ ಪ್ರಮಾಣ ಪತ್ರ ಹಾಗೂ ವಸತಿ ಯೋಜನೆಗಳಡಿ ನಿರ್ಮಾಣಗೊಂಡ ಮನೆಗಳಿಗೆ ಕದ ಸಂಖ್ಯೆ ನೀಡುವಲ್ಲಿ ಎದುರಾಗುತ್ತಿರುವ ತೊಂದರೆಗಳ ಬಗ್ಗೆ ಸದಸ್ಯರು ಗಮನ ಸೆಳೆದರು. ನಗರ ಯೋಜನಾ ಪ್ರಾಧಿಕಾರದಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಅಲೆದಾಟ ಹಾಗೂ ಮಧ್ಯವರ್ತಿಗಳ ಹಾವಳಿ ಗ್ರಾಮೀಣ ಜನತೆಗೆ ತೊಂದರೆಯಾಗಿ ಪರಿಣಮಿಸಿರುವುದಾಗಿ ತಿಳಿಸಿ, ವಿನ್ಯಾಸ ಅನುಮೋದನೆ ಅಧಿಕಾರವನ್ನು ಗ್ರಾಮ ಪಂಚಾಯತ್‌ಗಳಿಗೆ ನೀಡುವಂತೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು.

ಗ್ರಾಮ ಪಂಚಾಯತ್‌ಗಳು ಎಲ್ಲಾ ಮನೆಗಳಿಂದ ಒಣಕಸ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮೂಲಕ ಸ್ವಚ್ಛ ಭಾರತ ಮಿಷನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಕಿಶೋರ್ ಕುಮಾರ್ ಸೂಚಿಸಿದರು.

ಈ ವೇಳೆ ಹಲವಾರು ಬೇಡಿಕೆ ಹಾಗೂ ಮನವಿಗಳನ್ನು ಸ್ವೀಕರಿಸಿದ ಅವರು, ತಮ್ಮ ಕಾರ್ಯವ್ಯಾಪ್ತಿಯಲ್ಲಿ ಸಾಧ್ಯವಾದ ಮಟ್ಟಿಗೆ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪಂಚಾಯತ್ ಸಿಬ್ಬಂದಿಗಳ ಸಮಸ್ಯೆಗಳನ್ನೂ ಆಲಿಸಿ, ಅವುಗಳ ನಿವಾರಣೆಗೆ ಶ್ರಮಿಸುವುದಾಗಿ ತಿಳಿಸಿದರು.

ತೆಂಕಮಿಜಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಲಿನಿ ಕೆ. ಸಾಲ್ಯಾನ್, ಮಾಜಿ ಅಧ್ಯಕ್ಷೆ ರುಕ್ಮಿಣಿ, ಸದಸ್ಯರಾದ ಹರಿಪ್ರಸಾದ್ ಶೆಟ್ಟಿ, ಜಯಲಕ್ಷ್ಮೀ ಶೆಟ್ಟಿಗಾರ್, ದಿನೇಶ್ ಬಿ.ಎಲ್., ಮಹೇಶ್, ನಿಶಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ, ಕಾರ್ಯದರ್ಶಿ ರಮೇಶ್ ಸೇರಿದಂತೆ ಪಂಚಾಯತ್ ಸಿಬ್ಬಂದಿ ಹಾಗೂ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.


slider