ಮೂಡುಬಿದಿರೆ: ಸುರಸಾರವ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ದ್ವಿತೀಯ ವರ್ಷದ ಸಂಗೀತೋತ್ಸವ–2026 ಕಾರ್ಯಕ್ರಮ ಭಾನುವಾರ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು.
ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸುದರ್ಶನ್ ಎಂ. ಉದ್ಘಾಟಿಸಿ ಮಾತನಾಡಿ, ರಾಗ–ತಾಳಗಳ ಮೂಲಕ ಭಗವಂತನನ್ನು ಸಾಕ್ಷಾತ್ಕಾರಗೊಳಿಸಬಹುದಾಗಿದೆ. ಸಂಗೀತದ ಮೂಲಕ ದೈವಾನುಭವ ಪಡೆಯಲು ಸಾಧ್ಯ. ಸಂಗೀತ ಒಂದು ದೈವಿಕ ಕಲೆ. ಇದು ಮನಸ್ಸು, ದೇಹ ಹಾಗೂ ಪ್ರಕೃತಿಯೊಂದಿಗೂ ಸಂಯೋಜನೆ ಸಾಧಿಸಿ ಮಾನವನ ಬದುಕನ್ನು ಹಸನಾಗಿಸುತ್ತದೆ ಎಂದು ಹೇಳಿದರು.
ಕಲಾ ಪೋಷಕ ಕೆ. ಶ್ರೀಪತಿ ಭಟ್ ಅಧ್ಯಕ್ಷತೆವಹಿಸಿದರು.
ಸಂಸ್ಥೆಯ ಅಧ್ಯಕ್ಷ ಯಶವಂತ್ ಎಂ.ಜಿ ಪ್ರಸ್ತಾವಿಕವಾಗಿ ಮಾತನಾಡಿ, ತಮ್ಮ ಸಂಗೀತ ಸಾಧನೆಯನ್ನು ವೈಯಕ್ತಿಕ ಮಟ್ಟಕ್ಕೆ ಸೀಮಿತಗೊಳಿಸದೆ ಸಮಾಜದ ಮಕ್ಕಳಿಗೆ ಉಪಯೋಗವಾಗುವ ಉದ್ದೇಶದಿಂದ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಪ್ರಾರಂಭದಲ್ಲಿ ಸ್ವಗೃಹದಲ್ಲೇ ಸಂಗೀತ ತರಗತಿಗಳನ್ನು ಆರಂಭಿಸಿದ್ದು, ಇಂದು ಅನೇಕ ವಿದ್ಯಾರ್ಥಿಗಳು ಸಂಗೀತ ಶಿಕ್ಷಣ ಪಡೆಯುತ್ತಿದ್ದಾರೆ. ಜಿ ಕನ್ನಡ ವಾಹಿನಿಯ ‘ಸರಿಗಮಪ’ ರಿಯಾಲಿಟಿ ಶೋ ನಂತರ ದೊರೆತ ಅನುಭವಗಳು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯವಿದೆ ಎಂಬ ಅರಿವಿಗೆ ಬಂತು. ವಿವಿಧ ಭಾಷೆಗಳ ಸಂಗೀತ ಪ್ರಕಾರಗಳನ್ನು ಉತ್ತೇಜಿಸುವ ಗುರಿಯೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದರು.
ಪ್ರಭಾತ್ ಸಿಲ್ಕ್ ಮಾಲಕ ಪೂರ್ಣಚಂದ್ರ ಜೈನ್ , ಉದ್ಯಮಿಗಳಾದ ಈಶ್ವರ ಪ್ರಸಾದ್, ಸುಶಾಂತ್ ಭಂಡಾರಿ, ಆಲ್ವಿನ್ ಸಾಸ್ತಾನ, ಪೂರ್ಣಿಮಾ ಉಡುಪಿ, ವೇದಮೂರ್ತಿ ಶಶಿಧರ ಪುರೋಹಿತ್ ಕಟಪಾಡಿ, ಪ್ರೆಸ್ ಕ್ಲಬ್ ಮೂಡುಬಿದಿರೆ ಅಧ್ಯಕ್ಷ ಸೀತಾರಾಮ ಆಚಾರ್ಯ, ಎಸ್.ಕೆ.ಜಿ. ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಯಜ್ಞೇಶ್ವರ ಆಚಾರ್ಯ, ಮೂಡುಬಿದಿರೆ ಪುರಸಭಾ ಸದಸ್ಯ, ಕಾಂಗ್ರೆಸ್ ಅಧ್ಯಕ್ಷ ಪುರಂದರ ದೇವಾಡಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ:
ಸಂಸ್ಥೆಯ ಪ್ರತಿಷ್ಠಿತ “ಕಲಾ ವಿಪೂಷಣ” ಪ್ರಶಸ್ತಿಯನ್ನು ಶ್ರೀಪತಿ ಭಟ್ ಅವರಿಗೆ ಪ್ರದಾನಿಸಲಾಯಿತು. “ಕಲಾಭೂಷಣ” ಪ್ರಶಸ್ತಿಯನ್ನು ವೇದಮೂರ್ತಿ ಶಶಿಧರ ಪುರೋಹಿತ್ ಕಟಪಾಡಿ, ಕಲಾವಿದ ಉದ್ಯಮಿ ಆಲ್ವಿನ್ ಸಾಸ್ತಾನ, ಕಲಾಪೋಷಕಿ ಪೂರ್ಣಿಮಾ ಉಡುಪಿ ಹಾಗೂ ಕಲಾಸಂಘಟಕ ಸುಶಾಂತ ಭಂಡಾರಿ ಮಂಗಳೂರು ಅವರಿಗೆ ನೀಡಿ ಗೌರವಿಸಲಾಯಿತು. ಯುವ ವಕೀಲ ಶ್ರೀವತ್ಸ ತಂತ್ರಿ ಅವರಿಗೆ “ಯುವ ಸಾಧಕ ಪ್ರಶಸ್ತಿ” ಪ್ರದಾನಿಸಲಾಯಿತು.
ಸಂಸ್ಥೆಯ ಸಹ ನಿರ್ದೇಶಕಿ ನವ್ಯಶ್ರೀ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ವಿಜೇತ ಹಾಗೂ ಜಿ ಕನ್ನಡ ಸರಿಗಮಪ ಖ್ಯಾತ ಗಾಯಕ ಯಶವಂತ್ ಜೆ.ಜಿ. ಅವರನ್ನು ಸನ್ಮಾನಿಸಲಾಯಿತು.
ವಿನಯ್ ಕುಮಾರ್, ರೇಷ್ಮಾ ಶೆಟ್ಟಿ , ವಿಜಯ ಪದ್ಮ, ಪೂಜಾ ಶೆಟ್ಟಿ, ಶಾಂತಿ ಅನಿತಾ, ಸುಷ್ಮಾ ನವೀನ್ ಕೊಟ್ಯಾನ್, ವನಿತಾ ಅವರು ಸನ್ಮಾನ ಪತ್ರ ವಾಚಿಸಿದರು. ಉಪನ್ಯಾಸಕ ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರ ಸಂಘದ ಸಂಯೋಜಕಿ ಸೌಮ್ಯ ವಂದಿಸಿದರು.
ಭಾರತೀಯ ಸಂಪ್ರದಾಯದಂತೆ ಶಾರದ ಪೂಜೆ ಮತ್ತು ಗುರುವಂದನಾ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ವಿದ್ಯಾರ್ಥಿಗಳ ಸಂಗೀತ ಕಾರ್ಯಕ್ರಮ ನಡೆಯಿತು.






