ತುಳುನಾಡ ಐಸಿರಿ ಕ್ರಿಕೆಟ್ : ಸಿಲ್ವಾಸ್ ವಾರಿಯರ್ಸ್‌ಗೆ ಚಾಂಪಿಯನ್

BIDIRE NEWS

ಮೂಡುಬಿದಿರೆ: ವಾಪಿ ತುಳುನಾಡ ಐಸಿರಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ವರ್ಷದ ಕ್ರಿಕೆಟ್ ಪಂದ್ಯಾವಳಿ ಭಾನುವಾರ ಸಿಲ್ವಾಸದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಉದ್ಘಾಟಿಸಿದ್ದ ಸುಸಜ್ಜಿತ ಕ್ರೀಡಾಂಗಣದಲ್ಲಿ  ನಡೆಯಿತು.

‘ಗ್ರೀನ್‌ರೋ ಆಫ್ ಇಂಡಿಯಾ’ ಖ್ಯಾತಿಯ ಡಾ. ಆರ್.ಕೆ. ನಾಯರ್ ಹಾಗೂ ಟ್ರಸ್ಟ್ ಅಧ್ಯಕ್ಷ ನವೀನ್ ಶೆಟ್ಟಿ ಅವರು  ಪಂದ್ಯಾವಳಿಗೆ ಚಾಲನೆ ನೀಡಿದರು.

ಪಂದ್ಯಾವಳಿಯಲ್ಲಿ ಬರೋಡಾ, ಸೂರತ್, ದಮನ್, ವಾಪಿ ಹಾಗೂ ಸಿಲ್ವಾಸ ಭಾಗಗಳಿಂದ ಒಟ್ಟು 8 ಪುರುಷರ ತಂಡಗಳು ಮತ್ತು 3 ಮಹಿಳಾ ತಂಡಗಳು ಭಾಗವಹಿಸಿದ್ದವು. ಪುರುಷರಿಗೆ 8 ಓವರ್ ಹಾಗೂ ಮಹಿಳೆಯರಿಗೆ 5 ಓವರ್‌ಗಳ ಪಂದ್ಯಗಳನ್ನು ಆಯೋಜಿಸಲಾಗಿತ್ತು.

ಪುರುಷರ ವಿಭಾಗ:
ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಸಿಲ್ವಾಸ್ ವಾರಿಯರ್ಸ್ ತಂಡ ಪ್ರಥಮ ಸ್ಥಾನ ಪಡೆದು ೧೫,೦೦೦ ರೂ. ನಗದು ಬಹುಮಾನ ಗೆದ್ದುಕೊಂಡಿತು. ಸೂರತ್ ತಂಡ ದ್ವಿತೀಯ ಸ್ಥಾನ ಪಡೆದು 11,೦೦೦ ರೂ. ನಗದು ಬಹುಮಾನ ಪಡೆಯಿತು.

ಮಹಿಳಾ ವಿಭಾಗ:
ಸೂರತ್ ಮಹಿಳಾ ತಂಡ ಪ್ರಥಮ ಸ್ಥಾನ ಪಡೆದು 1೦,೦೦೦ ರೂ. ನಗದು ಬಹುಮಾನ ಹಾಗೂ ಟ್ರೋಫಿ ಎತ್ತಿಹಿಡಿಯಿತು. ಸಿಲ್ವಾಸ್ ಮತ್ತು ವಾಪಿ ಮಹಿಳಾ ತಂಡಗಳು ದ್ವಿತೀಯ ಸ್ಥಾನವನ್ನು ಹಂಚಿಕೊಂಡವು.

ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಡಾ. ಆರ್.ಕೆ. ನಾಯರ್ ಅವರು ಒಟ್ಟು 35,೦೦೦ ರೂ. ಪ್ರೋತ್ಸಾಹಧನ ನೀಡಿ ಅಭಿನಂದಿಸಿದರು.

“ಈ ಕ್ರೀಡಾಕೂಟ ಕೇವಲ ಗೆಲುವು–ಸೋಲಿಗೆ ಸೀಮಿತವಾಗದೆ, ಪರಸ್ಪರ ಸೌಹಾರ್ದತೆ, ಏಕತೆ ಹಾಗೂ ಮನೋರಂಜನೆಗಾಗಿ ಆಯೋಜಿಸಲಾಗಿದೆ” ಎಂದು ಪಂದ್ಯಾವಳಿಯ ಸಂಚಾಲಕರಾದ ಚೇತನ್ ಗೌಡ ಹಾಗೂ ಶರತ್ ಶೆಟ್ಟಿ ತಿಳಿಸಿದರು.

ಸುಮಾರು 7೦೦ಕ್ಕೂ ಅಧಿಕ ಕ್ರೀಡಾಭಿಮಾನಿಗಳು ಪಂದ್ಯಾವಳಿಯನ್ನು ವೀಕ್ಷಿಸಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಸೂರತ್ ಕರ್ನಾಟಕ ಸಮಾಜದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಟ್ರಸ್ಟ್ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ, ಖಜಾಂಚಿ ಗಣೇಶ್ ಶೆಟ್ಟಿ, ಅನಿಲ್ ಶೆಟ್ಟಿ, ಸುಕೇಶ್ ಶೆಟ್ಟಿ, ಉಪಾಧ್ಯಕ್ಷರಾದ ವೆಂಕಟೇಶ್ ಪೂಜಾರಿ, ಉದಯ ಶೆಟ್ಟಿ, ದಿವಾಕರ ಶೆಟ್ಟಿ (ವಲ್ಸಾದ್), ಸದಾಶಿವ ಪೂಜಾರಿ, ಅಮಿತ್ ಶೆಟ್ಟಿ (ಸಿಲ್ವಾಸ್), ಮಹಿಳಾ ಅಧ್ಯಕ್ಷೆ ಅರುಂಧತಿ ಶೆಟ್ಟಿ, ಮಹಿಳಾ ಕಾರ್ಯದರ್ಶಿ ಶಾಲಿನಿ ಶೆಟ್ಟಿ, ಮಾಜಿ ಮಹಿಳಾ ಅಧ್ಯಕ್ಷೆ ರಜನಿ ಶೆಟ್ಟಿ, ಯುವ ವಿಭಾಗದ ಅಧ್ಯಕ್ಷ ಹರೀಶ್ ಶೆಟ್ಟಿ (ವಲ್ಸಾದ್) ಸೇರಿದಂತೆ ಅನೇಕ ಗಣ್ಯರು, ಸದಸ್ಯರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಐಸಿರಿಯ ಗೌರವಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅವರು ಪಂದ್ಯಾವಳಿಯ ವೀಕ್ಷಕ ವಿವರಣೆ ಮಾಡಿದರು.

 ವರದಿ: ನಿಶಾ ಇರುವೈಲು 
slider