ಮೂಡುಬಿದಿರೆ:ಪುತ್ತೂರಿನಲ್ಲಿ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದ ಭಾಷಣದ ಹಿನ್ನೆಲೆಯಲ್ಲಿ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧ ದಾಖಲಿಸಲಾದ ದೂರನ್ನು ಶಾಸಕ ಉಮಾನಾಥ ಕೋಟ್ಯಾನ್ ಖಂಡಿಸಿದ್ದಾರೆ.
ಸ್ವಾಮಿ ವಿವೇಕಾನಂದರು ಭಾರತದ ರಾಷ್ಟ್ರಭಕ್ತಿ ಹಾಗೂ ಆತ್ಮಬಲದ ಪ್ರತೀಕವಾಗಿದ್ದು, ಅವರ ಜಯಂತಿಯಂತಹ ಪವಿತ್ರ ವೇದಿಕೆಯಲ್ಲಿ ದೇಶ–ಸಮಾಜದ ಹಿತದ ಕುರಿತು ಮಾತನಾಡಿರುವುದನ್ನು ‘ದ್ವೇಷ ಭಾಷಣ’ ಎಂದು ಬಿಂಬಿಸುವುದು ದುರುದ್ದೇಶಪೂರಿತ ರಾಜಕೀಯ ಕ್ರಮವಾಗಿದೆ ಎಂದು ಹೇಳಿದರು.
ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರ ಮಾತುಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಲು ಯತ್ನ ನಡೆಯುತ್ತಿದೆ. ಹಿಂದೂಗಳ ಧ್ವನಿಯನ್ನು ಹತ್ತಿಕ್ಕುವ ಕಾರ್ಯ ಕಾಂಗ್ರೆಸ್ ಸರಕಾರದಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಕೋಟ್ಯಾನ್ ಆರೋಪಿಸಿದರು.
ಅಭಿವ್ಯಕ್ತಿ ಸ್ವಾತಂತ್ರ್ಯ ಸಂವಿಧಾನ ನೀಡಿದ ಮೂಲಭೂತ ಹಕ್ಕು. ಆದರೆ ರಾಷ್ಟ್ರವಾದಿ ಚಿಂತನೆ ವ್ಯಕ್ತಪಡಿಸಿದರೆ ದೂರು–ಕೇಸು–ಬೆದರಿಕೆ ಎನ್ನುವ ವಾತಾವರಣ ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಈ ಪ್ರಕರಣವನ್ನು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಯಾವುದೇ ಪಕ್ಷಪಾತವಿಲ್ಲದೆ ನಿರ್ವಹಿಸಬೇಕು. ಸುಳ್ಳು ಹಾಗೂ ರಾಜಕೀಯ ಲೇಪಿತ ದೂರುಗಳ ಮೂಲಕ ಸಮಾಜದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಪ್ರಯತ್ನಗಳನ್ನು ಬಿಜೆಪಿ ತೀವ್ರವಾಗಿ ಎದುರಿಸಲಿದೆ ಎಂದು ಉಮಾನಾಥ ಕೋಟ್ಯಾನ್ ತಿಳಿಸಿದ್ದಾರೆ.

