ಮೂಡುಬಿದಿರೆ: ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಮೂಡುಬಿದಿರೆ ತಾಲೂಕಿನ ಒಟ್ಟು ಎಂಟು ಮಂಡಲಗಳಲ್ಲಿ ಹಿಂದೂ ಸಂಗಮ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹಿಂದೂ ಸಂಗಮ ಆಯೋಜನಾ ಸಮಿತಿ ತಾಲೂಕು ಅಧ್ಯಕ್ಷ ವಿವೇಕ್ ಆಳ್ವ ತಿಳಿಸಿದ್ದಾರೆ.
ನಗರದ ಕನ್ನಡಭವನದಲ್ಲಿ ಗುರುವಾರ ಸಂಜೆ ನಡೆದ ಹಿಂದೂ ಸಂಗಮ ಪ್ರಮುಖರ ಸಭೆ ಹಾಗೂ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.25ರಂದು ಪುತ್ತಿಗೆ, ಬೆಳುವಾಯಿ, ಶಿರ್ತಾಡಿ, ಕಲ್ಲಬೆಟ್ಟು, ಹೊಸಬೆಟ್ಟು ಹಾಗೂ ಮೂಡುಬಿದಿರೆ ನಗರ ಮಂಡಲಗಳಲ್ಲಿ ಸಮಾವೇಶ ನಡೆಯಲಿದ್ದು, ಫೆ.1ರಂದು ಕಲ್ಲಮುಂಡ್ಕೂರು ಮತ್ತು ನೆಲ್ಲಿಕಾರು ಮಂಡಲಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಸಭೆಯ ಪ್ರಾಸ್ತಾವಿಕ ಭಾಷಣದಲ್ಲಿ ಸಂಯೋಜಕ ಮಂಜುನಾಥ್ ಬೆಳುವಾಯಿ ಮಾತನಾಡಿ, ದೇಶಾದ್ಯಂತ ಹಿಂದೂ ಸಂಘಟನಾ ಚಟುವಟಿಕೆಗಳು ನಡೆಯುತ್ತಿದ್ದು, ವಿಶ್ವವ್ಯಾಪಿ ಅಸ್ತಿತ್ವ ಹೊಂದಿರುವ ಆರ್‌ಎಸ್‌ಎಸ್ ಸಂಸ್ಥೆ ಶತಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸುವ ಉದ್ದೇಶದಿಂದ ಹಿಂದೂ ಸಂಗಮ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಹಿಂದೂ ಸಮಾಜದ ಸಂಘಟನೆ ಕೇವಲ ಸಂಸ್ಥಾತ್ಮಕ ಚಟುವಟಿಕೆಗಳಿಗೆ ಸೀಮಿತವಾಗದೆ, ರಾಷ್ಟ್ರಸೇವೆ, ಲೋಕಕಲ್ಯಾಣ ಮತ್ತು ಸಮಾಜಮುಖಿ ಚಿಂತನೆಗಳಿಗೆ ಬದ್ಧವಾಗಿದ್ದು, ಸಂಘಟನೆ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ, ನಾಗರಿಕ ಶಿಷ್ಟಾಚಾರ ಸೇರಿದಂತೆ ಹಲವು ವಿಚಾರಗಳ ಕುರಿತು ಸಮಾವೇಶಗಳಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಶರತ್ ಡಿ. ಶೆಟ್ಟಿ, ಮನೋಜ್ ಶೆಣೈ, ಸುರೇಶ್ ಕೆ. ಪೂಜಾರಿ, ಸಂಗೀತಾ ಪ್ರಭು, ಕಾರ್ಯದರ್ಶಿ ಆನಂದ ಕೆ. ಶಾಂತಿನಗರ, ಕೋಶಾಧಿಕಾರಿಗಳಾದ ಪ್ರಶಾಂತ್ ಭಂಡಾರಿ ಹಾಗೂ ಗೋಪಾಲಕೃಷ್ಣ, ಮಹಿಳಾ ಸಂಯೋಜಕಿ ಉಷಾ ಬೋರ್ಕರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

