ಮೂಡುಬಿದಿರೆ: ಮೆಸ್ಕಾಂ ಮೂಡುಬಿದಿರೆ ಉಪವಿಭಾಗದ ವ್ಯಾಪ್ತಿಯಲ್ಲಿ ನೂತನ ಶಾಖೆಗಳ ಶೀಘ್ರ ಕಾರ್ಯಾಚರಣೆ ಹಾಗೂ ಶಿರ್ತಾಡಿಯ ನೂತನ ಸಬ್ ಸ್ಟೇಷನ್ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವಂತೆ ಒತ್ತಾಯಿಸಿ ಮೆಸ್ಕಾಂನ ಉನ್ನತಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಅವರ ಮಾರ್ಗದರ್ಶನದಲ್ಲಿ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಕುಮಾರ್ ಅವರ ನೇತೃತ್ವದ ನಿಯೋಗವು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ಹಾಗೂ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಜಯಕುಮಾರ್ ಅವರನ್ನು ಭೇಟಿಯಾಗಿ ಚರ್ಚಿಸಿತು.
ಮೂಡುಬಿದಿರೆ ಉಪವಿಭಾಗದಲ್ಲಿ ಮಂಜೂರಾಗಿರುವ ನೂತನ ಮೆಸ್ಕಾಂ ಶಾಖೆಗಳನ್ನು ಶೀಘ್ರವಾಗಿ ಆರಂಭಿಸಬೇಕು.ಶಿರ್ತಾಡಿಯಲ್ಲಿ ಪ್ರಗತಿಯಲ್ಲಿರುವ ನೂತನ ಸಬ್ ಸ್ಟೇಷನ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಕ್ತಾಯಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಈ ಭಾಗದ ವಿದ್ಯುತ್ ಸಮಸ್ಯೆಗಳನ್ನು ನೀಗಿಸಲು ಮೂಲಸೌಕರ್ಯಗಳನ್ನು ಬಲಪಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಯಿತುಮ
ಕರ್ನಾಟಕ ಸರ್ಕಾರದ ಕ.ಜಾ.ಸ ಸದಸ್ಯರಾದ ರಾಜೇಶ್ ಕಡಲಕೆರೆ, ಮೂಡುಬಿದಿರೆ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅನೀಶ್ ಡಿಸೋಜ ಉಪಸ್ಥಿತರಿದ್ದರು. ಅಧಿಕಾರಿಗಳು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬಾಕಿ ಇರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರೈಸುವ ಭರವಸೆ ನೀಡಿದ್ದಾರೆ.


