ಮೂಡಾಯಿಕಾಡು ಶ್ರೀನಾಗ ಬ್ರಹ್ಮಲಿಂಗೇಶ್ವರ–ವನದುರ್ಗಾ ಕ್ಷೇತ್ರದಲ್ಲಿ ಫೆ.5ರಂದು ನಾಗದೇವರ ಪ್ರತಿಷ್ಠಾ ಮಹೋತ್ಸವ

BIDIRE NEWS

ಮೂಡುಬಿದಿರೆ: ಬೆಳುವಾಯಿ ಗ್ರಾಮದ ಮೂಡಾಯಿಕಾಡುವಿನಲ್ಲಿರುವ ಶ್ರೀ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್ , ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಫೆಬ್ರವರಿ 5ರಂದು ಗುರುವಾರ ಶ್ರೀ ಅಷ್ಟಕುಲ ನಾಗೇಂದ್ರ ಸಾನಿಧ್ಯದಲ್ಲಿ ಶ್ರೀ ನಾಗದೇವರ ಪ್ರತಿಷ್ಠಾ ಮಹೋತ್ಸವ ಭಕ್ತಿಭಾವದಿಂದ ನೆರವೇರಲಿದೆ.





5ರಂದು ಬೆಳಿಗ್ಗೆ 10.15ಕ್ಕೆ ಒದಗುವ ಮೀನ ಲಗ್ನ ಸುಮೂರ್ಹದಲ್ಲಿ ಪ್ರತಿಷ್ಠಾ ಕಾರ್ಯ ನೆರವೇರಲಿದೆ. ಫೆಬ್ರವರಿ 4ರಂದು ಬುಧವಾರ
ಗುರುಗಣಪತಿ ಪೂಜೆ, ಪುಣ್ಯಾಹವಾಚನ, ಮಹಾಸಂಕಲ್ಪ, ವಾಸ್ತುಪೂಜೆ, ವಾಸ್ತುಹೋಮ ಸೇರಿದಂತೆ ವಿವಿಧ ದೇವತಾ ಕಾರ್ಯಗಳು ನಡೆಯಲಿವೆ.

ಫೆಬ್ರವರಿ 5ರಂದು ಗುರುವಾರ ನಾಂದಿ ಸಮಾರಾಧನೆ, ಪ್ರತಿಷ್ಠಾ ಹೋಮ, ಸುಮೂರ್ಹದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶ ಸ್ಥಾಪನೆ, ಕಲಶಾಭಿ ಹೋಮ, ತತ್ವ ಹೋಮ, ಕಲಾಹೋಮ, ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಮೊದಲಾದ ಪುಣ್ಯಕಾರ್ಯಗಳು ನಡೆಯಲಿವೆ.


ಪವಿತ್ರ ಪುಣ್ಯಕ್ಷೇತ್ರದ ಮಹತ್ವ

ಬೆಳುವಾಯಿ ಗ್ರಾಮದ ಪೂರ್ವ–ಈಶಾನ್ಯ ಭಾಗದಲ್ಲಿರುವ ಮೂಡಾಯಿಕಾಡು ಪ್ರದೇಶವು ಅಪ್ಪಕುಲ ನಾಗೇಂದ್ರ, ಗಣಪತಿ ಸಹಿತ ಈಶ್ವರ ಸಾನಿಧ್ಯ ಹಾಗೂ ವನದುರ್ಗೆಯ ಪವಿತ್ರ ಕ್ಷೇತ್ರವಾಗಿದ್ದು, ಪಂಚಶಕ್ತಿಗಳ ಭೂಮಿಯೆಂದು ಪ್ರಸಿದ್ಧವಾಗಿದೆ. ಕಳೆದ ಹಲವು ವರ್ಷಗಳಿಂದ ಕ್ಷೇತ್ರ ಅಜೀರ್ಣಾವಸ್ಥೆಯಲ್ಲಿದ್ದು, ಗ್ರಾಮದ ಕ್ಷೇಮಾಭಿವೃದ್ಧಿಗೆ ಧಕ್ಕೆ ಉಂಟಾಗಿರುವ ಹಿನ್ನೆಲೆ ಭಕ್ತಾಧಿಗಳು ಒಂದಾಗಿ ಜೀರ್ಣೋದ್ಧಾರಕ್ಕೆ ನಿರ್ಧಾರ ಕೈಗೊಂಡಿದ್ದರು. ಬಾಲಾಲಯದಲ್ಲಿ ಪ್ರತಿಷ್ಠಾಪಿಸಿ ಶಿಲಾನ್ಯಾಸ ಕಾರ್ಯಕ್ರಮವನ್ನು ಈಗಾಗಲೇ ಯಶಸ್ವಿಯಾಗಿ ನೆರವೇರಿಸಲಾಗಿದೆ. ಮುಂದಿನ ಹಂತವಾಗಿ ನಾಗದೇವರ ಪ್ರತಿಷ್ಠೆ ಹಾಗೂ ದೇವಸ್ಥಾನ ನಿರ್ಮಾಣ ಕಾರ್ಯವನ್ನು ದಾನಿಗಳ ಸಹಕಾರದಿಂದ ಟ್ರಸ್ಟ್ ಮುಂದಾಳತ್ವದಲ್ಲಿ ಕೈಗೊಳ್ಳಲಾಗಿದೆ.

ಭಕ್ತರಲ್ಲಿ ವಿನಂತಿ

ಈ ಪುಣ್ಯ ಕಾರ್ಯದಲ್ಲಿ ಸಜ್ಜನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು–ಮನ–ಧನಗಳಿಂದ ಸಹಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಟ್ರಸ್ಟ್ ಹಾಗೂ ಜೀರ್ಣೋದ್ಧಾರ ಸಮಿತಿ ವಿನಂತಿಸಿದೆ.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕನ್ಯಾನ ಸದಾಶಿವ ಶೆಟ್ಟಿ, ಸಂಚಾಲಕರಾದ ಸೂರಜ್ ಆಳ್ವ ಬೆಳುವಾಯಿ, ಸಂದೀಪ್ ಶೆಟ್ಟಿ, ಸಮರ್ಥ ಬೆಳುವಾಯಿ, ಕೋಶಾಧ್ಯಕ್ಷರು ಹಾಗೂ ಸಮಿತಿಯ ಸರ್ವ ಸದಸ್ಯರು, ಅಲ್ಲದೆ ಟ್ರಸ್ಟ್ ಅಧ್ಯಕ್ಷ ಎಂ. ದೇವಾನಂದ ಭಟ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಈ ಕುರಿತು ಮಾಹಿತಿ ನೀಡಿದ್ದಾರೆ.


slider