ಮೀಶೋ ಹೆಸರಿನಲ್ಲಿ ವಾಟ್ಸಾಪ್ ವಂಚನೆ: ಬೆದ್ರದ ಉದ್ಯಮಿ ಮೊಬೈಲ್ ಸಂಖ್ಯೆ ಹ್ಯಾಕ್, ಹಣಕ್ಕಾಗಿ ಬೇಡಿಕೆ

BIDIRE NEWS
ಮೂಡುಬಿದಿರೆ: ಜನಪ್ರಿಯ ಶಾಪಿಂಗ್ ಅಪ್ಲಿಕೇಶನ್ ಮೀಶೋ (Meesho) ಹೆಸರನ್ನು ದುರ್ಬಳಕೆ ಮಾಡಿಕೊಂಡು ನಡೆಯುತ್ತಿರುವ ಸೈಬರ್ ವಂಚನೆಯ ಬಗ್ಗೆ ಎಚ್ಚರಿಕೆ ಸಂದೇಶಗಳು ಹರಿದಾಡುತ್ತಿದ್ದರೂ, ವಂಚಕರು ಬೆದ್ರದ ಪ್ರಭಾತ್ ಸಿಲ್ಕ್ ಮಾಲೀಕರಾದ ಪೂರ್ಣಚಂದ್ರ ಅವರ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಬೆಳಕಿಗೆ ಬಂದಿದೆ.


ವಂಚನೆಯ ಜಾಲ:
ಭಾನುವಾರ ಬೆಳಗ್ಗಿನಿಂದಲೇ ವಾಟ್ಸಾಪ್‌ನಲ್ಲಿ ಮೀಶೋ ಆ್ಯಪ್‌ನಂತೆಯೇ ನಕಲಿ ಖಾತೆ ತೆರೆದು, ಗ್ರಾಹಕರನ್ನು ವಂಚಿಸಲು ಪ್ರಯತ್ನಿಸುತ್ತಿರುವ ಸೈಬರ್ ಅಪರಾಧಿಗಳ ಬಗ್ಗೆ ಜಾಗರೂಕರಾಗುವಂತೆ ಎಚ್ಚರಿಕೆ ನೀಡುವ ಸಂದೇಶಗಳು ವ್ಯಾಪಕವಾಗಿ ಹರಿದಾಡಲು ಶುರುಮಾಡಿದ್ದವು.
ಈ ಎಚ್ಚರಿಕೆ ಸಂದೇಶಗಳು ಹರಿದಾಡುವ ನಡುವೆಯೇ, ವಂಚಕರು ಪೂರ್ಣಚಂದ್ರ ಅವರ ಮೊಬೈಲ್ ಸಂಖ್ಯೆಯನ್ನು ಹ್ಯಾಕ್ ಮಾಡಿದ್ದಾರೆ. ಹ್ಯಾಕ್ ಆದ ನಂತರ, ಅದೇ ಮೊಬೈಲ್ ಸಂಖ್ಯೆಯಿಂದ ಅವರ ಆತ್ಮೀಯರು ಹಾಗೂ ಪರಿಚಿತರಿಗೆ "ತುರ್ತಾಗಿ ಹಣದ ಅಗತ್ಯವಿದೆ, ಕಳುಹಿಸಿ" ಎಂದು ವಿನಂತಿಸಿ ಸಂದೇಶಗಳನ್ನು ರವಾನಿಸಲಾಗಿದೆ.

ಈ ಸಂದೇಶಗಳು ನೇರವಾಗಿ ಪೂರ್ಣಚಂದ್ರ ಅವರ ಅಧಿಕೃತ ಮೊಬೈಲ್ ಸಂಖ್ಯೆಯಿಂದಲೇ ಬಂದಿದ್ದರಿಂದ, ಆರಂಭದಲ್ಲಿ ಹಣ ಕಳುಹಿಸಲು ಮುಂದಾದವರೂ ಇದ್ದರು. ಆದರೆ, ಸಕಾಲದಲ್ಲಿ ಪೂರ್ಣಚಂದ್ರ ಅವರಿಗೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದ ನಂತರ, ಇದು ವಂಚಕರ ಕೃತ್ಯ ಎಂಬ ಸತ್ಯಾಂಶ ಬೆಳಕಿಗೆ ಬಂದಿದೆ. ಇದರಿಂದಾಗಿ ಭಾರೀ ಆರ್ಥಿಕ ನಷ್ಟ ಸಂಭವಿಸುವುದು ತಪ್ಪಿದೆ.

ಸಾರ್ವಜನಿಕರಿಗೆ ಮನವಿ
ಯಾವುದೇ ಆತ್ಮೀಯರ ಮೊಬೈಲ್ ಸಂಖ್ಯೆಯಿಂದ ಈ ರೀತಿಯ ತುರ್ತು ಹಣದ ಬೇಡಿಕೆ ಬಂದರೆ, ತಕ್ಷಣ ಯಾವುದೇ ಕ್ರಮ ಕೈಗೊಳ್ಳುವ ಮೊದಲು ಒಂದು ಕ್ಷಣ ಯೋಚಿಸುವುದು ಅತ್ಯಗತ್ಯ.  ಹಣ ಕಳುಹಿಸುವ ಮುನ್ನ ದೂರವಾಣಿ ಕರೆ ಮಾಡಿ, ಬೇಡಿಕೆ ನಿಜವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದ್ದು.
slider