ಕೆ. ಅಮರನಾಥ ಶೆಟ್ಟಿ ಟ್ರಸ್ಟ್‌ನಿಂದ ಗಾಂಧಿನಗರದಲ್ಲಿ ಉಚಿತ ತಪಾಸಣಾ ಶಿಬಿರ

BIDIRE NEWS

ಮೂಡುಬಿದಿರೆ: ಕ್ಯಾನ್ಸರ್ ರೋಗವನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ. ಇಂತಹ ಕಾಯಿಲೆಗಳ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಟ್ರಸ್ಟಿ ಡಾ. ಅಮರಶ್ರೀ ಹೇಳಿದರು.

ಗಾಂಧಿನಗರದ ಧನಲಕ್ಷ್ಮಿ ಕ್ಯಾಶ್ಯೂ ಫ್ಯಾಕ್ಟರಿಯ ಕಾರ್ಮಿಕರಿಗಾಗಿ ಕೆ. ಅಮರನಾಥ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಕ್ಯಾನ್ಸರ್ ತಪಾಸಣಾ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು.

ಟ್ರಸ್ಟ್‌ನ ಉದ್ದೇಶ ಸ್ಪಷ್ಟಪಡಿಸಿದ ಡಾ. ಅಮರಶ್ರೀ:

ಮುಖ್ಯವಾಗಿ ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ ಕಾಯಿಲೆಯ ತಪಾಸಣೆ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ಈ ಚಾರಿಟೇಬಲ್ ಟ್ರಸ್ಟನ್ನು ಪ್ರಾರಂಭಿಸಲಾಗಿದೆ ಎಂದು ಡಾ. ಅಮರಶ್ರೀ ತಿಳಿಸಿದರು.

ಅವರು ಮುಂದುವರಿಸಿ, "ಕೆಲವು ರೋಗಗಳ ತಪಾಸಣೆಗೆ ದುಬಾರಿ ಖರ್ಚು ತಗಲುತ್ತದೆ ಎಂದು ಹೆದರಿ ಬಡವರು ವೈದ್ಯರ ಬಳಿ ಹೋಗಲು ಹಿಂದೇಟು ಹಾಕುತ್ತಾರೆ. ಅಂತವರಿಗೋಸ್ಕರವೇ ನಾವು ನಿರಂತರವಾಗಿ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದ್ದೇವೆ. ಇದರ ಪ್ರಯೋಜನ ಎಲ್ಲರಿಗೂ ಸಮರ್ಪಕವಾಗಿ ಸಿಗುವಂತಾಗಲಿ," ಎಂದು ಹಾರೈಸಿದರು.


ಅಮರನಾಥ ಶೆಟ್ಟಿ ಜನಪರ ಸೇವೆಯ ನೆನಪು:

ಧನಲಕ್ಷ್ಮಿ ಕ್ಯಾಶ್ಯೂ ಎಕ್ಸ್ಪೋರ್ಟ್‌ನ ಮಾಲೀಕರಾದ ಶ್ರೀಪತಿ ಭಟ್ ಮಾತನಾಡಿ, "ದಿವಂಗತ ಅಮರನಾಥ ಶೆಟ್ಟಿ ಅವರು ಶಾಸಕರಾಗಿ, ಮಂತ್ರಿಯಾಗಿ ಜನ ನೆನಪಿಡುವಂತಹ ಉತ್ತಮ ಸೇವೆಯನ್ನು ಮಾಡಿದ್ದಾರೆ. ಅವರ ಹೆಸರಿನಲ್ಲಿ ಪುತ್ರಿ ಡಾ. ಅಮರಶ್ರೀ ಅವರು ಟ್ರಸ್ಟ್ ಆರಂಭಿಸಿ ಜನರಿಗೆ ಆರೋಗ್ಯ ಸೇವೆಯನ್ನು ನೀಡುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ ಕಾರ್ಯ," ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಶಿಬಿರದಲ್ಲಿ ಟ್ರಸ್ಟಿ ಜಯಶ್ರೀ ಅಮರನಾಥ ಶೆಟ್ಟಿ, ಸತ್ಯನಾರಾಯಣ ಪೂಜಾ ಸಮಿತಿ ಗಾಂಧಿನಗರದ ಅಧ್ಯಕ್ಷ ಜಯರಾಮ್ ಕೋಟ್ಯಾನ್, ರೋಟರಿ ಕ್ಲಬ್ ಆಫ್ ಟೆಂಪಲ್ ಟೌನ್‌ನ ಕಾರ್ಯದರ್ಶಿ ಭರತ್ ಶೆಟ್ಟಿ, ಮಡಿವಾಳ ಸಮಾಜ ಸೇವಾ ಸಂಘದ ಪ್ರಮುಖ ಶ್ಯಾಮ್ ಮಡಿವಾಳ್, ಡಾ. ಮಹಿಮಾ ಮತ್ತು ಡಾ. ಪ್ರಾಪ್ತಿ ಉಪಸ್ಥಿತರಿದ್ದರು.

ಶಂಕರ್ ಕೋಟ್ಯಾನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.




slider
Random Fade Slider