ಜಿಲ್ಲಾ ಕಂಬಳ ಸಮಿತಿಯಿಂದ ಲೋಕೇಶ್ ಶೆಟ್ಟಿ ವಜಾಕ್ಕೆ ಆಗ್ರಹ: ಕಂಬಳಾಭಿಮಾನಿಗಳ ಬೃಹತ್ ಸಭೆಯಲ್ಲಿ ನಿರ್ಣಯ

BIDIRE NEWS

ಮೂಡುಬಿದಿರೆ: ಜಿಲ್ಲಾ ಕಂಬಳ ಸಮಿತಿ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್‌ನ ಪದಾಧಿಕಾರಿಯೊಬ್ಬರು ನಿರಂತರವಾಗಿ ಶಿಸ್ತು ಉಲ್ಲಂಘನೆ ಮತ್ತು ಕಂಬಳ ಕ್ಷೇತ್ರದ ಗಣ್ಯರನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಅವರನ್ನು ತಕ್ಷಣವೇ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಕಂಬಳ ಅಭಿಮಾನಿಗಳ ಸಭೆಯಲ್ಲಿ ಒಕ್ಕೊರಲಿನ ನಿರ್ಣಯ ಕೈಗೊಳ್ಳಲಾಗಿದೆ.


ಕಂಬಳ ಕ್ಷೇತ್ರದ ಹಿರಿಯ ಸಾಧಕ ಗುಣಪಾಲ ಕಡಂಬ ಅವರಿಗೆ ನಡೆದ ಅವಹೇಳನವನ್ನು ಖಂಡಿಸಿ, ಶುಕ್ರವಾರ ಸಾಯಂಕಾಲ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಆಯೋಜಿಸಲಾಗಿದ್ದ ‘ಕಂಬಳಾಭಿಮಾನಿಗಳ ಬೃಹತ್ ಸಭೆ’ಯಲ್ಲಿ ಈ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು.

ಸಭೆಯ ಪ್ರಮುಖ ನಿರ್ಣಯಗಳು:

ಪದಾಧಿಕಾರಿ ವಜಾಕ್ಕೆ ಆಗ್ರಹ: ಜಿಲ್ಲಾ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್‌ನ ಕೋಶಾಧಿಕಾರಿಯವರು ಸುಮಾರು 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕಂಬಳ ಪ್ರಮುಖರ ತೇಜೋವಧೆ ಮಾಡಿದ್ದಾರೆ. ಓಟಗಾರರನ್ನು ಅವಹೇಳನ ಮಾಡುವುದು ಹಾಗೂ ಗುಣಪಾಲ ಕಡಂಬರನ್ನು ನಿರಂತರವಾಗಿ ಟೀಕಿಸುತ್ತಿರುವ ಲೋಕೇಶ್ ಶೆಟ್ಟಿಯನ್ನು ಎರಡೂ ಸಮಿತಿಗಳಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಲಾಯಿತು.

 ಬಹಿರಂಗ ಕ್ಷಮೆಯಾಚನೆ: ಕಡಂಬರನ್ನು ಅವಹೇಳನ ಮಾಡಿದ ಮುಚ್ಚೂರು ಲೋಕೇಶ್ ಶೆಟ್ಟಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.

ಹೋರಾಟದ ಎಚ್ಚರಿಕೆ: ಕಡಂಬರು ಮಾತ್ರವಲ್ಲದೆ ಕಂಬಳ ಕ್ಷೇತ್ರದ ಯಾವುದೇ ವ್ಯಕ್ತಿಗೆ ಮುಂದಿನ ದಿನಗಳಲ್ಲಿ ಅವಮಾನವಾದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

 ಸಮಿತಿ ಪುನರ್ ರಚನೆ: ಜಿಲ್ಲಾ ಕಂಬಳ ಸಮಿತಿ ಹಾಗೂ ರಾಜ್ಯ ಕಂಬಳ ಅಸೋಸಿಯೇಷನ್ ಅನ್ನು ಕೂಡಲೇ ಪುನರ್ ರಚಿಸಬೇಕು. ಅಲ್ಲದೆ, ಕಂಬಳದ ಎಲ್ಲಾ ವ್ಯವಸ್ಥಾಪಕರು ಹಾಗೂ ಕೋಣಗಳ ಮಾಲೀಕರಿಗೆ ಜಿಲ್ಲಾ ಕಂಬಳ ಸಮಿತಿಯಲ್ಲಿ 'ಶುಲ್ಕರಹಿತ ಸದಸ್ಯತ್ವ' ನೀಡಬೇಕು ಎನ್ನುವ ಆಗ್ರಹಗಳು ಕೇಳಿಬಂದವು.

ಸಭೆಯ‌ ಆಯೋಜಕ ಹರ್ಷವರ್ಧನ ಪಡಿವಾಳ್, ಪ್ರಧಾನ ತೀರ್ಪುಗಾರ ರಾಜೀವ್ ಶೆಟ್ಟಿ ಎಡ್ತೂರು, ಹೊಕ್ಕಾಡಿಗೋಳಿ ಕಂಬಳ ಆಯೋಜಕ ಅಧ್ಯಕ್ಷ ರಶ್ಮಿತ್ ಶೆಟ್ಟಿ, ಅನಿಲ್ ಶೆಟ್ಟಿ ಬಜ್ಪೆ, ಚಿತ್ತರಂಜನ್ ಭಂಡಾರಿ ಐಕಳ, ಮೂಲ್ಕಿ ಗೌತಮ್ ಜೈನ್, ಕೋಣಗಳ ಯಜಮಾನರುಗಳಾದ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲಿಯಾನ್, ಬೇಲಾಡಿ ಬಾವ ಅಶೋಕ್ ಶೆಟ್ಟಿ, ಖಾಸಿಂ ವೇಣೂರು, ಜಗತ್ಪಾಲ ಶೆಟ್ಟಿ ಹೊಕ್ಕಾಡಿಗೋಳಿ, ಗಣೇಶ್ ನಾಯಕ್ ಪಂಡಿತ್, ಪದವು ಕಾನಡ್ಕದ ಡೊಲ್ಫಿ ಡಿ'ಸೋಜ, ಸಾಣೂರು ಜಗದೀಶ್ ಪೂಜಾರಿ, ನಾಗೇಶ್ ದೇವಾಡಿಗ ಸುರತ್ಕಲ್ ತಡಂಬೈಲು, ಸುರೇಶ್ ಶೆಟ್ಟಿ ಹರಿಮೀನಾಕ್ಷಿ ದೋಟ, ಸುಬ್ರಹ್ಮಣ್ಯ ಪ್ರಭು ಸುರತ್ಕಲ್, ಕಂಬಳ ಅಕಾಡೆಮಿಯ ಸುರೇಶ್ ಕೆ. ಪೂಜಾರಿ, ಸುಭಾಶ್ಚಂದ್ರ ಚೌಟ, ಜ್ವಾಲ ಪ್ರಸಾದ್, ಜಾನ್ ಸಿರಿಲ್ ಡಿ'ಸೋಜ, ಕಂಬಳ ಓಟಗಾರ ಶ್ರೀನಿವಾಸ ಗೌಡ ಸಹಿತ ಕಂಬಳ ಕ್ಷೇತ್ರದ ಪ್ರಮುಖರು, ಓಟಗಾರರು, ಯಜಮಾನರು ಹಾಗೂ ನೂರಾರು ಸಂಖ್ಯೆಯಲ್ಲಿ ಕಂಬಳ ಅಭಿಮಾನಿಗಳು ಭಾಗವಹಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

slider