ಮೂಡುಬಿದಿರೆ: ತಾಲೂಕಿನ ಹೊಸಬೆಟ್ಟು ಮಂಡಲದ ತೋಡಾರು, ಇರುವೈಲು, ಪುಚ್ಚಮೊಗರು ಹಾಗೂ ಹೊಸಬೆಟ್ಟು ಗ್ರಾಮಗಳ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ ವೈಭವದಿಂದ ಜರುಗಿತು.
ಮೂಡುಬಿದಿರೆ ಜೈನಮಠದ ಶ್ರೀ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಗೋಪೂಜೆ ನೆರವೇರಿಸಿ, ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಆಶೀರ್ವಚನ ನೀಡಿದ ಅವರು,
“ದೇಶದಲ್ಲಿ ಭೂಕಂಪ, ಕೊರೊನಾ ಮಹಾಮಾರಿ, ಯುದ್ಧದಂತಹ ಸಂಕಷ್ಟಕರ ಸಂದರ್ಭಗಳಲ್ಲಿ ನಿರಾಶ್ರಿತರಿಗೆ ಆಸರೆಯಾಗಿ ನಿಂತ ಶಕ್ತಿ ರಾಷ್ಟ್ರೀಯ ಸ್ವಯಂಸೇವಕ ಸಂಘ. ಇಂದಿನ ಯುಗದಲ್ಲಿ ಸಂಸ್ಕೃತಿ ವಿಕೃತಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ, ಸ್ತ್ರೀಯರು ಹಾಗೂ ಸಮಾಜಕ್ಕೆ ಸಂಸ್ಕಾರಯುತ ಜೀವನ ರೂಪಿಸುವಲ್ಲಿ ಸಂಘದ ಪಾತ್ರ ಅತ್ಯಂತ ಮಹತ್ವದ್ದಾಗಿದೆ,” ಎಂದು ಹೇಳಿದರು.
ಆರ್‌ಎಸ್‌ಎಸ್ ಮಂಗಳೂರು ವಿಭಾಗದ ಪ್ರಚಾರಕ್ ಸುರೇಶ್ ಜಿ. ಅವರು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸ್ವಯಂಸೇವಕರು ಅಳವಡಿಸಿಕೊಳ್ಳಬೇಕಾದ ಜೀವನಶೈಲಿ ಕುರಿತು ಪ್ರೇರಣಾದಾಯಕವಾಗಿ ಮಾತನಾಡಿದರು.
ಆಕರ್ಷಕ ಶೋಭಾಯಾತ್ರೆ
ಕಾರ್ಯಕ್ರಮದ ಅಂಗವಾಗಿ ಶ್ರೀ ಕ್ಷೇತ್ರ ತೋಡಾರು ದ್ವಾರದ ಬಳಿಯಿಂದ ದೈವಸ್ಥಾನದ ವಠಾರದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ನೂರಾರು ಮಹಿಳೆಯರು ಪೂರ್ಣಕುಂಭದೊಂದಿಗೆ ಪಾಲ್ಗೊಂಡರು. ವಿವಿಧ ಭಜನಾ ತಂಡಗಳ ಕೀರ್ತನೆ, ಚೆಂಡೆ ಹಾಗೂ ವಾದ್ಯಘೋಷಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.
ಹಿಂದೂ ಸಂಗಮದ ಅಂಗವಾಗಿ ಮಕ್ಕಳಿಗೆ ಧಾರ್ಮಿಕ ಛದ್ಮವೇಷ ಸ್ಪರ್ಧೆ ಆಯೋಜಿಸಲಾಗಿತ್ತು. ಪುರಾಣಪ್ರಸಿದ್ಧ ಪಾತ್ರಗಳಲ್ಲಿ ಮಿಂಚಿದ ಮಕ್ಕಳು ಸಾರ್ವಜನಿಕರ ಗಮನ ಸೆಳೆದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯರು ಬಹುಮಾನ ವಿತರಿಸಿದರು.
ಕಾರ್ಯಕ್ರಮದಲ್ಲಿ ತೋಡಾರು ಶಕ್ತಿ ಕೇಂದ್ರದ ಅಧ್ಯಕ್ಷ ಸುನೀಲ್ ಶೆಟ್ಟಿ ಹಾನ್ಯಗುತ್ತು, ಸದಾಶಿವ ಟಿ. ಸುವರ್ಣ ಬಾರ್ದಿಲ್, ಶಿವಪ್ರಸಾದ್ ಭಾವದಬೈಲು, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ರೈತ ಮುಖಂಡ ಶಾಂತಿಪ್ರಸಾದ್ ಸೇರಿದಂತೆ ನಾಲ್ಕು ಗ್ರಾಮಗಳ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಣಮ್ ತೋಡಾರು ಸ್ವಾಗತಿಸಿ, ರಿಷಂತ್ ತೋಡಾರು ಕಾರ್ಯಕ್ರಮ ನಿರೂಪಿಸಿದರು.


