ಮೂಡುಬಿದಿರೆ: ಮೂಲಕ ಕಳೆದ 36 ವರ್ಷಗಳಿಂದ ಸಾರ್ಥಕ ಸೇವೆ ಸಲ್ಲಿಸುತ್ತಿರುವ ಹಿರಿಯ ಭಾಗವತ ಶ್ರೀ ಸುರೇಂದ್ರ ಪೈ ಅವರಿಗೆ ಕೆಸರುಗದ್ದೆ ಜಿ.ಎಸ್.ಬಿ ಸಮಾಜದಿಂದ ಗೌರವ ಸನ್ಮಾನ ಆಯೋಜಿಸಲಾಗಿದೆ.
ಜ.11ರಂದು ಶ್ರೀರಾಮ ಮಂದಿರ ಕೆಸರುಗದ್ದೆಯಲ್ಲಿ ನಡೆಯಲಿರುವ 14ನೇ ವರ್ಷದ 'ಜಿ.ಎಸ್.ಬಿ ಸ್ಪರ್ಧಾ ಕಾರ್ಯಕ್ರಮ'ದ ಶುಭ ಸಂದರ್ಭದಲ್ಲಿ ಈ ಸನ್ಮಾನ ಪ್ರದಾನ ಮಾಡಲಾಗುವುದು.
ಮೂಲತಃ ಗಂಗೊಳ್ಳಿಯವರಾದ ಸುರೇಂದ್ರ ಪೈ ಅವರು ಕಳೆದ 56 ವರ್ಷಗಳಿಂದ ಪುತ್ತಿಗೆಯ ಸಂಪಿಗೆಯಲ್ಲಿ ನೆಲೆಸಿದ್ದಾರೆ. ಪುತ್ತಿಗೆಯ ಶ್ರೀ ಸೋಮನಾಥೇಶ್ವರ ದೇವರ ಸನ್ನಿಧಿಯಲ್ಲಿ 1990ರಲ್ಲಿ ಐವರು ಕಲಾವಿದರನ್ನೊಳಗೊಂಡ 'ಪಂಚ ಕೂಟ' ಚಿಕ್ಕ ಮೇಳ ಸ್ಥಾಪಿಸಿ, ಅದರ ಯಜಮಾನರಾಗಿ, ಭಾಗವತರಾಗಿ ಮತ್ತು ಸಂಚಾಲಕರಾಗಿ ನಿರಂತರವಾಗಿ ಮುನ್ನಡೆಸುತ್ತಿದ್ದಾರೆ.
ಭಾಗವತ ಪುತ್ತಿಗೆ ಬೆರ್ಕೆ ಶ್ರೀನಿವಾಸ ನಾಯ್ಕ ಅವರನ್ನು ಮಾನಸಿಕ ಗುರುಗಳೆಂದು ಸ್ವೀಕರಿಸಿ, ಸ್ವ-ಸಾಮರ್ಥ್ಯದಿಂದ ಭಾಗವತಿಕೆಯನ್ನು ಮೈಗೂಡಿಸಿಕೊಂಡಿದ್ದಾರೆ. ಪ್ರತಿ ವರ್ಷ ಹತ್ತನಾಜೆಯ ನಂತರ ಆರು ತಿಂಗಳ ಕಾಲ ಪುತ್ತಿಗೆ, ಮೂಡುಬಿದಿರೆ, ಕಾರ್ಕಳ, ಮುಲ್ಕಿ ಸೇರಿದಂತೆ ವಿವಿಧ ಭಾಗಗಳಲ್ಲಿ ಮನೆ-ಮನೆಗೆ ತೆರಳಿ ಯಕ್ಷಗಾನ ಪ್ರದರ್ಶನ ನೀಡುವ ಮೂಲಕ ಪುರಾಣ ಸಂಸ್ಕೃತಿಯನ್ನು ಪಸರಿಸುತ್ತಿದ್ದಾರೆ.
ದೇವಸ್ಥಾನದ ಸಹಕಾರದೊಂದಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ವೇಷಭೂಷಣಗಳನ್ನು ದಾನಿಗಳಿಂದ ಸಂಗ್ರಹಿಸಿ ಮೇಳವನ್ನು ಸುಸಜ್ಜಿತಗೊಳಿಸಿದ್ದಾರೆ. ಕಳೆದ 25 ವರ್ಷಗಳಿಂದ ಶಿವರಾತ್ರಿಯಂದು 'ಅಹೋರಾತ್ರಿ ಭಜನಾ ಸೇವೆ'ಯನ್ನು ಯಶಸ್ವಿಯಾಗಿ ಸಂಘಟಿಸುತ್ತಿದ್ದಾರೆ.
ಹಲವಾರು ಪ್ರಮುಖ ಮೇಳಗಳಲ್ಲಿ ಅತಿಥಿ ಭಾಗವತರಾಗಿ ಸೇವೆ ಸಲ್ಲಿಸಿರುವ ಪೈ ಅವರ ಸಾಧನೆಯನ್ನು ಗುರುತಿಸಿ ಈಗಾಗಲೇ ಅನೇಕ ಸಂಘ-ಸಂಸ್ಥೆಗಳು ಗೌರವಿಸಿವೆ. ಇದೀಗ ಕೆಸರುಗದ್ದೆ ಜಿ.ಎಸ್.ಬಿ ಸಮಾಜವು ಇವರ ಕಲಾ ಬದುಕಿನ ಶ್ರೇಷ್ಠತೆಯನ್ನು ಗೌರವಿಸಲು ಮುಂದಾಗಿದೆ.

