ಮೂಡುಬಿದಿರೆ: ದುರುದ್ದೇಶದಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ ಅದಕ್ಕೆ ಕಾನೂನಿನಲ್ಲಿ ಮಾನ್ಯತೆ ಇರುವುದಿಲ್ಲ. ದಾಂಪತ್ಯ ಜೀವನದಲ್ಲಿ ಮನಸ್ಸಿನ ನೆಮ್ಮದಿ ಹಾಗೂ ಸಮನ್ವಯವೇ ಮುಖ್ಯವಾಗಿದ್ದು, ಅಗತ್ಯವಿದ್ದಾಗ ಮಾತ್ರ ಕಾನೂನು ಮಾರ್ಗವನ್ನು ಆಯ್ಕೆ ಮಾಡಬೇಕು ಎಂದು ವಕೀಲೆ ರೂಪಾ ಬಲ್ಲಾಳ್ ಹೇಳಿದರು.
ಅವರು ಶುಕ್ರವಾರ ಪಡುಮಾರ್ನಾಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಪಡುಮಾರ್ನಾಡು ಹಾಗೂ ಮೂಡುಮಾರ್ನಾಡು ಗ್ರಾಮಗಳ ಮಹಿಳಾ ಗ್ರಾಮಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಹಿಳೆಯರಿಗೆ ಕಾನೂನು ಅರಿವು ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ ಉಪಾಧ್ಯಾಯ ವಹಿಸಿದ್ದರು.
ಸಿಡಿಪಿಒ ವೀಣಾ ಹೆಗ್ಡೆ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರು ಸಮಾಜದಲ್ಲಿ ಹೊಂದಾಣಿಕೆಯ ಜೀವನ ನಡೆಸುವ ಮನೋಭಾವ ಬೆಳೆಸಿಕೊಳ್ಳಬೇಕು. ಮಹಿಳೆಯರ ರಕ್ಷಣೆಗೆ ಸರ್ಕಾರದಿಂದ ಹಲವು ಇಲಾಖೆಗಳು ಕಾರ್ಯನಿರ್ವಹಿಸುತ್ತಿದ್ದು, ಮಹಿಳೆಯರು ತಪ್ಪು ಮಾಡಿ ಆ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ತಿಳಿಸಿದರು.
ಸನ್ಮಾನ:
ನಾಟಿ ವೈದ್ಯೆ ಸುನಂದಾ ಶೆಟ್ಟಿ ಹಾಗೂ ತುಳುನಾಡಿನ ಧಾರ್ಮಿಕ–ಜಾನಪದ ಕಲೆ, ದೈವಾರಾಧನೆ ಮತ್ತು ಸಂಧಿ ಪಾಡ್ದನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶೋಭಾ ಅಚ್ಚರ ಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಕರ್ಕೇರಾ ಹಾಗೂ ಸಿ.ಎಸ್. ಕಲ್ಯಾಣಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರೋಗ್ಯ ಇಲಾಖೆಯ ಸಿಬ್ಬಂದಿ ವಿನೋದ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಸಜೀವಿನಿ ಒಕ್ಕೂಟದ ಸದಸ್ಯರು, ಸ್ವಸಹಾಯ ಗುಂಪು ಹಾಗೂ ಸ್ತ್ರೀಶಕ್ತಿ ಸಂಘಗಳ ಸದಸ್ಯರು, ಪಂಚಾಯತ್ ವ್ಯಾಪ್ತಿಯ ಮಹಿಳೆಯರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪಂಚಾಯತ್ ಸಿಬ್ಬಂದಿ ನಿಶಾ ಶೆಟ್ಟಿ ಸ್ವಾಗತಿಸಿದರು. ಪಿಡಿಒ ಸಾಯೀಶ್ ಚೌಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ಸಿಬ್ಬಂದಿ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ವನಿತಾ ವಂದಿಸಿದರು.

