ಕಡಲಕೆರೆ ಪ್ರೇರಣಾ ಶಾಲೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಗೌರವ: ಸಂಸ್ಕಾರಭರಿತ ಶಿಕ್ಷಣದಿಂದ ಸತ್ ಪ್ರಜೆಗಳ ರೂಪು- ರಾಘವೇಂದ್ರ ಭಂಡಾರ್ಕರ್

BIDIRE NEWS
ಮೂಡಬಿದಿರೆ: ಮಕ್ಕಳಿಗೆ ಪಠ್ಯ ಪುಸ್ತಕದ ಜ್ಞಾನ ಮಾತ್ರವಲ್ಲದೆ ಸಂಸ್ಕಾರಯುತ ಶಿಕ್ಷಣ ನೀಡಿದಾಗ ಮಾತ್ರ ಅವರು ಮುಂದಿನ ದಿನಗಳಲ್ಲಿ ಸತ್ ಪ್ರಜೆಗಳಾಗಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಾಧ್ಯ ಎಂದು ಜ್ಯೋತಿಷಿ, ವಾಸ್ತು ತಜ್ಞರಾದ ಮಾರೂರು ರಾಘವೇಂದ್ರ ಭಂಡಾರ್ಕರ್ ಹೇಳಿದರು.



ಶತಮಾನೋತ್ಸವ ಸಂಭ್ರಮದಲ್ಲಿರುವ ಕಡಲಕೆರೆಯ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಶುಭಾಶಯ ಕೋರಿದರು.
ಪಠ್ಯ ಶಿಕ್ಷಣದ ಜೊತೆಗೆ ಯಕ್ಷಗಾನ, ಚಿತ್ರಕಲೆ, ಕರಾಟೆ, ಭಗವದ್ಗೀತೆ ಪಠಣ, ಯೋಗ, ಸೂರ್ಯನಮಸ್ಕಾರ, ಪಂಚಾಂಗ ಶ್ರವಣ, ಭಕ್ತಿಗೀತೆ ಸೇರಿದಂತೆ ಆಧ್ಯಾತ್ಮಿಕ ಶಿಕ್ಷಣ ನೀಡುವ ಮೂಲಕ ಪ್ರೇರಣಾ ವಿದ್ಯಾಲಯವು ಜಿಲ್ಲೆಯಲ್ಲೇ ಮಾದರಿ ಶಿಕ್ಷಣ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಶಿಸ್ತಿನ ಶಿಕ್ಷಣ ವ್ಯವಸ್ಥೆ ಹಾಗೂ ಅಭಿವೃದ್ಧಿಗೆ ಶಿಕ್ಷಕರ ಪಾತ್ರವನ್ನು ಭಂಡಾರ್ಕರ್ ಮುಕ್ತಕಂಠದಿಂದ ಶ್ಲಾಘಿಸಿದರು.

ಶಾಲಾ ಸಂಚಾಲಕ ಎಂ. ಶಾಂತಾರಾಮ ಕುಡ್ವ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ವತ್ಸಲಾ ರಾಜೇಶ್ ಅವರು ಪ್ರಸ್ತಾವನೆ ನೀಡಿದ್ದು, ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು. ಶಿಕ್ಷಕಿಯರಾದ ಶಶಿಕಲಾ ಕೋಟ್ಯಾನ್ ಹಾಗೂ ಶ್ರೀಮತಿ ಹರ್ಷಿತಾ ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಸಂಹಿತಾ ಡಿ. ಪೈ (ದ್ವಿತೀಯ), ಓಂ ಶೆಟ್ಟಿ (ತೃತೀಯ), ಪ್ರಿಯಾ ಎಸ್. ಕೋಟ್ಯಾನ್ (ಚತುರ್ಥ) ಬಹುಮಾನ ಪಡೆದರು. ರಾಜ್ಯ ಮಟ್ಟದಲ್ಲಿ ಆರಾಧ್ಯ ಶೆಟ್ಟಿ (ಪ್ರಥಮ), ಆಸ್ತಿಕ್ ನಾಯ್ಕ (ದ್ವಿತೀಯ), ಯದ್ವಿ (ತೃತೀಯ), ಮನ್ವಿತ್ (ಚತುರ್ಥ) ಪ್ರಶಸ್ತಿ ಪಡೆದರು. ಜಿಲ್ಲಾ ಮಟ್ಟದಲ್ಲಿ ಆರಾಧ್ಯಪ್ರಭು (ದ್ವಿತೀಯ), ದೀಪಾಂಶ್ ಡಿ. ಆಚಾರ್ಯ (ತೃತೀಯ), ಮನಸ್ವೀ ಶರ್ಮಾ (ಚತುರ್ಥ), ಮನ್ವಿತಾ ಪೂಜಾರಿ (ಆರನೇ) ಹಾಗೂ ತಾಲೂಕು ಮಟ್ಟದಲ್ಲಿ ಸಮರ್ಥ ಡಿ. ಆಚಾರ್ಯ (ದ್ವಿತೀಯ), ಮನೀಷ್ ಪೂಜಾರಿ (ತೃತೀಯ) ವಿಜೇತರಾದರು.

ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ‘ಕಲಾ ಸಾಧಕ’ ಮತ್ತು ‘ಕಲಾ ಪ್ರಭ’ ಸ್ವರ್ಣ ಪದಕಗಳನ್ನು ರಾಘವೇಂದ್ರ ಭಂಡಾರ್ಕರ್ ಅವರು ಹಸ್ತಾಂತರಿಸಿ ಗೌರವಿಸಿದರು.

ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ ಅತ್ಯುತ್ತಮ ಕ್ರಿಯಾಶೀಲತೆಗಾಗಿ ಲಭಿಸಿದ ರಾಷ್ಟ್ರಮಟ್ಟದ ಉತ್ತಮ ಶಾಲೆ ಪ್ರಶಸ್ತಿಯನ್ನು ಪ್ರೇರಣಾ ವಿದ್ಯಾಲಯದ ಪರವಾಗಿ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಅವರಿಗೆ ಸಂಚಾಲಕ ಶಾಂತಾರಾಮ ಕುಡ್ವ ಹಸ್ತಾಂತರಿಸಿ ಗೌರವಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಸರಸ್ವತಿ ದೇವಿ, ಭಾರತ ಮಾತೆ ಹಾಗೂ ಓಂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಆರತಿ ಬೆಳಗಿಸಲಾಯಿತು.
slider