ಸಾವಿರಕಂಬದ ಬಸದಿಯಲ್ಲಿ ಜಿನಮನ ಸೆಳೆದ ಬಾಹುಬಲಿಯ ಮಸ್ತಕಾಭಿಷೇಕ

BIDIRE NEWS
ಮೂಡುಬಿದಿರೆ: ಜೈನ ತೀರ್ಥ ಕ್ಷೇತ್ರಗಳಲ್ಲಿರುವ ಬಾಹುಬಲಿಯ ವಿರಾಟ್ ಶಿಲಾ ಮೂರ್ತಿಗಳಿಗೆ ಹನ್ನೆರಡು ವರ್ಷಗಳಿಗೊಮ್ಮೆ ಮಹಾಮಜ್ಜನ ಸಂಭ್ರಮ ನಡೆಯುತ್ತದೆ. ಅದೇ ಸಂಭ್ರಮವನ್ನು ನೆನಪಿಸುವಂತೆ ವಿಶಿಷ್ಠ ಎನ್ನಬಹುದಾದ ಅಪರೂಪದ ಮೂರು ಅಡಿ ಎತ್ತರದ ರಜತ ಬಾಹುಬಲಿಯ ಲೋಹ ಬಿಂಬಕ್ಕೆ ಶುಕ್ರವಾರ ಸಂಜೆ ಇಲ್ಲಿನ ಐತಿಹಾಸಿಕ ಸಾವಿರ ಕಂಬದ ಬಸದಿಯ ಆವರಣದಲ್ಲಿ ಮಹಾಮಸ್ತಕಾಭಿಷೇಕ ಸಂಭ್ರಮ ವೈಭವದಿಂದ ಜರಗಿತು. ಮೂಡುಬಿದಿರೆ ಆರೋಹ ಮನೆಯ ತಮನಂಗಡಿ ರೋಹಿಣಿ ಆದಿರಾಜ್ ಅವರ ಆತ್ಮಶಾಂತಿಗಾಗಿ ಮಕ್ಕಳಾದ ಆರೋಹ ಶೈಲೇಂದ್ರ ಕುಮಾರ್ ಮತ್ತು ಸಹೋದರ ಸಹೋದರಿಯರು ಮತ್ತು ಕುಟುಂಬಸ್ಥರ ಸೇವೆಯಾಗಿ ಜರಗಿದ ಈ ಮಹಾಮಸ್ತಕಾಭಿಷೇಕ ಸೇವೆ ಸೇರಿದ ಶ್ರಾವಕ , ಶ್ರಾವಿಕೆಯರ ವರ್ಗವನ್ನು ಭಾವಪರವಶರನ್ನಾಗಿಸಿತು.
ಸಂಜೆ ಮೂಡುಬಿದಿರೆ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರ ಹಿರಿತನದಲ್ಲಿ ಜೈನಮಠದಿಂದ ಅಗ್ರೋದಕ ಮೆರವಣಿಗೆ ಸಾವಿರ ಕಂಬದ ಬಸದಿಗೆ ಆಗಮಿಸಿತು. ಬಸದಿಯ ಒಳಾಂಗಣದ ಬಲ ಭಾಗದಲ್ಲಿ ನ ಶ್ವೇತವರ್ಣದ ಅಡಿಕೆ, ತೋರಣ, ಪುಷ್ಪಾಲಂಕೃತ ವೇದಿಕೆಯಲ್ಲಿ ಇರಿಸಲಾದ ಬಾಹುಬಲಿ ಮೂರ್ತಿಗೆ ಭಟ್ಟಾರಕರ ಜತೆ ಇಂದ್ರರುಗಳ ಸಹಭಾಗಿತ್ವದಲ್ಲಿ ಧಾರ್ಮಿಕ ವಿದಿವಿಧಾನಗಳೊಂದಿಗೆ ಮಹಾಮಸ್ತಕಾಭಿಷೇಕ ನೆರವೇರಿಸಲಾಯಿತು.

ಕಲಶಾರ್ಚನೆ, ಮಂಗಲಾಷ್ಟಕ, ಜಿನಗಾನದೊಂದಿಗೆ ಆರಂಭಗೊಂಡ ಅಭಿಷೇಕ ಪ್ರಕ್ರಿಯೆಗೆ ಭಟ್ಟಾರಕ ಶ್ರೀಗಳವರು ಚಾಲನೆ ನೀಡಿದರು. ಆರಂಭದಲ್ಲಿ ಜಲಾಭಿಷೇಕ, ಎಳನೀರು, ತೆಂಗಿನ ಹಾಲು, ಇಕ್ಷುರಸ, ಧಾನ್ಯಗಳು, ಅರಿಶಿನ, ಅರಳು, ಕಷಾಯ, ಹೀಗೆ ವಿವಿಧ ಅಭಿಷೇಕಗಳು ಮೂರ್ತಿಯನ್ನು ರಂಗು ರಂಗಾಗಿಸಿ ವಿಶೇ ಷ ಧಾರ್ಮಿಕ ಅನುಭೂತಿಗೆ ಕಾರಣವಾದವು.
ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಧಾರವಾಡ ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಡಾ. ಅರಳ ನಿರಂಜನ ಕುಮಾರ್ ಸಹಿತ ಪ್ರಮುಖರು ಅಭಿಷೇಕವನ್ನು ನೆರವೇರಿಸಿದರು. ಡಾ. ಹೆಗ್ಗಡೆಯವರ ಸಹೋದರಿ ಪದ್ಮಲತಾ ನಿರಂಜನ್ ಕುಮಾರ್ ತನ್ನ ತಾಯಿ ಮಾತೃಶ್ರೀ ರತ್ನಮ್ಮ ಹೆಗ್ಗಡೆಯವರು ಹಾಡಿದ್ದ ರಾಗದಲ್ಲೇ ತೊರೆದೆ ರಾಜ್ಯದಾ ಭೋಗಮಂ... ಜಿನ ಸ್ತುತಿಯನ್ನು ಹಾಡಿ ಗಮನಸೆಳೆದರು. ಬೆಳದಿಂಗಳ ಸಹಿತ ಬಸದಿಯ ಹೊರಾಂಗಣದ ಹೊನಲು ಬೆಳಕಿನಲ್ಲಿ ಬಾಹುಬಲಿಯ ಮಜ್ಜನದ ವಿವಿಧ ವರ್ಣ ಕ್ಷಣಗಳನ್ನು ಸೇರಿದ ಧರ್ಮ ಬಂಧುಗಳು ಕಣ್ತುಂಬಿಕೊಂಡರು.
ಜಾನಪದ ವಿದ್ವಾಂಸ ಡಾ.ಎಸ್.ಪಿ. ಪದ್ಮಪ್ರಸಾದ್ ತುಮಕೂರು ಮಾತನಾಡಿ ಶಕ್ತಿ, ಸಂಪತ್ತಿನ ಜತೆಗೆ ವಿವೇಕವೂ ಸಮತೂಕದಲ್ಲಿದ್ದ ತ್ಯಾಗವೀರ ಬಾಹುಬಲಿ ಹೊಂದಿದ್ದ ನಶ್ವರತೆ ಮತ್ತು ತ್ಯಾಗದ ಮನೋಭಾವ ಆತನನ್ನು ಭವ್ಯಾತ್ಮನನ್ನಾಗಿಸಿತು ಎಂದರು. ಉನ್ನತ ಮನಸ್ಸು ಮತ್ತು ನಿರ್ಲಿಪ್ತತೆ ನಮಗೆ ಬಾಹುಬಲಿಯ ಸಂದೇಶ ಎಂದವರು ಹೇಳಿದರು.
ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ , ಶಿರ್ತಾಡಿ ಶಿಮುಂಜೆಗುತ್ತು ಡಿ. ಸಂಪತ್ ಸಾಮ್ರಾಜ್ಯ, ಮೂಡುಬಿದಿರೆ ಚೌಟರ ಅರಮನೆಯವರು, ಸಹಿತ ಜೈನ ಸಮಾಜದ ಪ್ರಮುಖರು ,ಹೆಚ್ಚಿನ ಸಂಖ್ಯೆಯಲ್ಲಿ ಶ್ರಾವಿಕೆಯರು ಪಾಲ್ಗೊಂಡಿದ್ದರು. ಸರ್ವಮಂಗಳ ಮಹಿಳಾ ಸಂಘದ ಸಕಾಲಿಕ ಜಿನಗಾನ, ಚೆಂಡೆ, ಕೊಂಬು, ವಾದ್ಯಮೇಳಗಳ ನಿನಾದ ಸಂಭ್ರಮಕ್ಕೆ ವಿಶೇಷ ರಂಗೇರಿಸಿದವು.

ಅಪರೂಪದ ಬಾಹುಬಲಿ!
ಶಿಲಾವಿಗ್ರಹವಾಗಿ ಕಾಣುವ ಬಾಹುಬಲಿಯ ಮೂರ್ತಿಗಳೇ ವಿರಳ. ಸಾವಿರ ಕಂಬದ ಬಸದಿಯಲ್ಲಿ ಅಂತಹ ವಿರಳ ಬಾಹುಬಲಿಯ ವಿಗ್ರಹವೇ ಅಪರೂಪದ್ದು. 1956ರ ವರೆಗೆ ಬಸದಿಯ ಕಿರಿಯ ರಥೋತ್ಸವದ ಸಂದರ್ಭ ಈ ಬಾಹುಬಲಿಗೆ ಮಹಾಮಜ್ಜನ ನಡೆಯುತ್ತಿತ್ತು ಎನ್ನಲಾಗಿದೆ. ಆ ಬಳಿಕ 2008 ಮತ್ತು 2014 ರಲ್ಲಿ ಹೀಗೊಂದು ಮಹಾಮಸ್ತಕಾಭಿಷೇಕ ನಡೆದಿದೆ. ಎನ್ನುತ್ತಾರೆ ಭಟ್ಟಾರಕರು. ಆದರೆ 2017ರಲ್ಲಿ ಶಿಕ್ಷಕರಾಗಿದ್ದ ಆದಿರಾಜ್ ತೀರಿಕೊಂಡಾಗ ಅವರ ಆಶಯದಂತೆ ಮಕ್ಕಳು ಈ ಮಹಾಮಸ್ತಕಾಭಿಷೇಕ ಸೇವೆ ನಡೆಸಿದ್ದರು. ಇದೀಗ ಅವರ ಪತ್ನಿ ರೋಹಿಣಿ ಅವರ ನಿಧನದ ಹಿನ್ನೆಲೆಯಲ್ಲಿ ಮಕ್ಕಳು ಮತ್ತೊಮ್ಮೆ ಈ ಸೇವೆ ನಡೆಸಿದ್ದಾರೆ. ಇದು ಅಪರೂಪದ ಲೋಹ ಬಿಂಬಕ್ಕೆ ಮಹಾಮಜ್ಜನದ ಅಪರೂಪದ ಕ್ಷಣ ಗಳಿಗೆ ಸಾಕ್ಷಿಯಾಗಿದೆ.
ವಿಶೇಷ ವರದಿ: ಗಣೇಶ್ ಕಾಮತ್
slider