ಮೂಡುಬಿದಿರೆ ಇರುವೈಲು ಗ್ರಾಮದ ಕಿಸಾನ್ ಪ್ರಮುಖರ ಸಭೆಯು ಗುರುವಾರ ಇರುವೈಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು.
ಗ್ರಾಮ ಸಮಿತಿ ಅಧ್ಯಕ್ಷ ರಾಜೇಶ್ ಕಾಳೂರು ಅವರ ಅಧ್ಯಕ್ಷತೆಯಲ್ಲಿ, ಪ್ರವೀಣ್ ಭಂಡಾರಿ ಅವರ ಮಾರ್ಗದರ್ಶನದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ರಾಜ್ಯ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಅಕ್ರಮ ಸಕ್ರಮೀಕರಣ ಹಾಗೂ ಕುಮ್ಕಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಶಾಂತಿ ಪ್ರಸಾದ್ ಹೆಗ್ಡೆ ಮಾಹಿತಿ ನೀಡಿದರು.
ಈ ತಿದ್ದುಪಡಿ ಕಾಯ್ದೆಯ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕೆಂದು ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಜೊತೆಗೆ ಕಿಸಾನ್ ಗ್ರಾಮ ಸಮಿತಿ ಸಮಾವೇಶವನ್ನು ಫೆಬ್ರವರಿ ತಿಂಗಳ ಎರಡನೇ ವಾರದಲ್ಲಿ ನಡೆಸಲು ನಿರ್ಧರಿಸಲಾಯಿತು.
ದಿನೇಶ್ ಶೆಟ್ಟಿ ದೊಡ್ಡಗುತ್ತು, ಶುಭಕರ್ ಕಾಜವ, ಸದಾನಂದ ಶೆಟ್ಟಿ, ವಲೇರಿಯನ್ ಕುಟಿನ್ಹಾ ಸೇರಿದಂತೆ ಹಲವಾರು ರೈತ ಪ್ರಮುಖರು ಉಪಸ್ಥಿತರಿದ್ದರು.

