ಮೂಡುಬಿದಿರೆ: ನಗರದ ಶ್ರೀ ಮಹಾವೀರ ಕಾಲೇಜಿನಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾಲೇಜಿನ ಹಳೆಯ ವಿದ್ಯಾರ್ಥಿ, ಎಸ್‌ಡಿಎಂ ಕಾಲೇಜು ಉಜಿರೆಯ ನಿವೃತ್ತ ಪ್ರಾಂಶುಪಾಲ ದಿನೇಶ್ ಚೌಟ್ ಅವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು. ಭಾರತ ತನ್ನದೇ ಸಂವಿಧಾನವನ್ನು ಜಾರಿಗೆ ತಂದು ಗಣರಾಜ್ಯವಾಗಿ ಘೋಷಿತವಾದ ದಿನ ಇದಾಗಿದೆ. ಈ ದಿನ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೇ, ನಮ್ಮ ಹಕ್ಕುಗಳು, ಕರ್ತವ್ಯಗಳು ಮತ್ತು ಮೌಲ್ಯಗಳನ್ನು ನೆನಪಿಸುವ ಮಹತ್ವದ ದಿನವಾಗಿದೆ ಎಂದು ಅವರು ಹೇಳಿದರು.
ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ, ಸ್ವಾತಂತ್ರ್ಯ ಹಾಗೂ ನ್ಯಾಯವನ್ನು ಒದಗಿಸಿದೆ. ಇಂದಿನ ಯುವಪೀಳಿಗೆ ದೇಶದ ಭವಿಷ್ಯವಾಗಿದ್ದು, ವಿದ್ಯಾಭ್ಯಾಸದ ಜೊತೆಗೆ ನೈತಿಕತೆ, ಶಿಸ್ತು, ದೇಶಪ್ರೇಮ ಹಾಗೂ ಸಾಮಾಜಿಕ ಜವಾಬ್ದಾರಿಗಳಲ್ಲಿಯೂ ಮುಂಚೂಣಿಯಲ್ಲಿ ನಿಲ್ಲಬೇಕು. ದೇಶ ನಮಗಾಗಿ ಏನು ನೀಡಿದೆ ಎಂಬುದಕ್ಕಿಂತ, ನಾವು ದೇಶಕ್ಕಾಗಿ ಏನು ನೀಡಿದ್ದೇವೆ ಎಂಬ ಚಿಂತನೆಯೊಂದಿಗೆ ರಾಷ್ಟ್ರದ ಪ್ರಗತಿಗೆ ಕೈಜೋಡಿಸಬೇಕು ಎಂದರು.
ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ವಿಶ್ವಸ್ಥ ಮಂಡಳಿಯ ಕೋಶಾಧಿಕಾರಿ ರಾಮಪ್ರಸಾದ್ ಭಟ್, ಮಹಾವೀರ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ, ವಿಶ್ವಸ್ಥ ಮಂಡಳಿಯ ಸದಸ್ಯರಾದ ಜೆ.ಜೆ. ಪಿಂಟೋ, ಪ್ರೊ. ರಮೇಶ್ ಭಟ್, ಎಸ್‌ಎನ್‌ಎಂ ಪಾಲಿಟೆಕ್ನಿಕ್ ಪ್ರಾಂಶುಪಾಲೆ ತಾರೀನಾ, ಜೆ.ಜಿ. ಸೋನ್ಸ್ ಐಟಿಐ ಪ್ರಾಂಶುಪಾಲ ಶ್ರೀಕಾಂತ್ ಹೊಳ್ಳ, ಎನ್‌ಕೆಸಿ ಅನಂತರಾಜ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಗಳ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ, ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ವಿಜಯಲಕ್ಷ್ಮಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

