ಎಡಪದವು: ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ 69ನೇ ಯು-19 ನೆಟ್‌ಬಾಲ್ ಪಂದ್ಯಾಟದಲ್ಲಿ ಅಮೋಘ ಸಾಧನೆಗೈದಿದ್ದು, ಈ ವಿಜಯದ ಸಂಭ್ರಮಾಚರಣೆಯು ಶನಿವಾರ ನಡೆಯಿತು.
ರಾಷ್ಟ್ರಮಟ್ಟದಲ್ಲಿ ಜಯಭೇರಿ ಬಾರಿಸಿದ ಸಾಧಕ ವಿದ್ಯಾರ್ಥಿಗಳನ್ನು ಎಡಪದವು ಹನುಮಾನ್ ಮಂದಿರದಿಂದ ಕಾಲೇಜಿನವರೆಗೆ ತೆರೆದ ಪಿಕಪ್ ವಾಹನದಲ್ಲಿ ಹೂಹಾರ ಹಾಕಿ, ಪಟಾಕಿ ಸಿಡಿಸಿ, ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಕರೆತರಲಾಯಿತು. ಹನುಮಾನ್ ಮಂದಿರದ ಬಳಿ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ ಕೋರಿ ಸಂಭ್ರಮಿಸಲಾಯಿತು.
ಚಿನ್ನದ ಪದಕದ ಸಾಧನೆ
ಡಿಸೆಂಬರ್ 24 ರಿಂದ 29 ರವರೆಗೆ ಪಿಲಿಕುಳದ ಸ್ಕೌಟ್ಸ್-ಗೈಡ್ಸ್ ಭವನದಲ್ಲಿ ನಡೆದ ಯು-19 ರಾಷ್ಟ್ರ ಮಟ್ಟದ ನೆಟ್‌ಬಾಲ್ ಸ್ಪರ್ಧೆಯಲ್ಲಿ ಕರ್ನಾಟಕದ ತಂಡವು ಅಂತಿಮ ಪಂದ್ಯದಲ್ಲಿ ಕೇರಳ ತಂಡವನ್ನು ಸೋಲಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿತ್ತು. ಈ ತಂಡದಲ್ಲಿ ಸ್ವಾಮಿ ವಿವೇಕಾನಂದ ಕಾಲೇಜು, ಜೈನ್ ಕಾಲೇಜು ಹಾಗೂ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿಯರು ಭಾಗವಹಿಸಿ ಈ ಐತಿಹಾಸಿಕ ಜಯ ತಂದುಕೊಟ್ಟಿದ್ದಾರೆ.
ಸಾಧಕರಿಗೆ ಸನ್ಮಾನ
ಕಾಲೇಜಿನ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ತಂಡದ ನಾಯಕಿ ನಿಖಿತಾ ಹಾಗೂ ಸದಸ್ಯರಾದ ಹರ್ಷಿತಾ, ಹೇಮ, ಸಂಧ್ಯಾ, ದಿವ್ಯಾ (ವಿವೇಕಾನಂದ ಕಾಲೇಜು), ಸುಪ್ರಿಯಾ, ದೀಪ್ತಿ (ಎಸ್.ಡಿ.ಎಂ ಕಾಲೇಜು) ಮತ್ತು ಶ್ರೀರಕ್ಷಾ, ಅನ್ವಿತಾ, ಸಿಂಚನ (ಜೈನ್ ಕಾಲೇಜು) ಹಾಗೂ ಅವರ ಪೋಷಕರನ್ನು ಗುರುತಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳ ಈ ಸಾಧನೆಗೆ ಮಾರ್ಗದರ್ಶನ ನೀಡಿದ ನವೀನ್ ಹೆಗ್ಡೆ (ಜೈನ್ ಕಾಲೇಜು ದೈಹಿಕ ಶಿಕ್ಷಕ),ನವೀನ್ ಕೊರೆಯ (ಇತಿಹಾಸ ಉಪನ್ಯಾಸಕ) ಮಾಧವ ವಿ.ಎಸ್ (ರಾಜ್ಯಶಾಸ್ತ್ರ ಉಪನ್ಯಾಸಕ), ಪ್ರಕಾಶ್ ಅಂತರವಳ್ಳಿ (ಆಂಗ್ಲ ಭಾಷಾ ಉಪನ್ಯಾಸಕ),ಅಪರ್ಣಾ (ತಂಡದ ಮ್ಯಾನೇಜರ್ ಹಾಗೂ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ), ಶಾಂತಾರಾಮ ರೈ (ಪ್ರೌಢಶಾಲಾ ದೈಹಿಕ ಶಿಕ್ಷಕ) ಅವರನ್ನು ಗೌರವಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಎನ್. ಪದ್ಮಶೇಖರ್ ಜೈನ್, ಸದಸ್ಯ ನಾರ್ಬಟ್ ಮಥಾಯಸ್, ಹಿರಿಯ ಉಪನ್ಯಾಸಕ ಸುಧಾಕರ್ ಶೆಟ್ಟಿ, ಪ್ರಾಂಶುಪಾಲೆ ಗಾಯತ್ರಿ ಹಾಗೂ ಆಡಳಿತಾಧಿಕಾರಿ ಪ್ರೇಮ್‌ನಾಥ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯಶಿಕ್ಷಕ ವಾಸು ಕೆ. ಕಾರ್ಯಕ್ರಮ ನಿರೂಪಿಸಿದರು, ಪ್ರಾಂಶುಪಾಲೆ ಗಾಯತ್ರಿ ಸ್ವಾಗತಿಸಿದರು ಮತ್ತು ಶಿಕ್ಷಕ ಕೃಷ್ಣ ಸುಭಾಸ್ ಗುಳಕಣ್ಣವರ್ ವಂದಿಸಿದರು.
ವರದಿ: ನಿಶಾ ಇರುವೈಲು

