ಒಡೆದು ಆಳುವ ಸಂಚಿಗೆ ತಡೆ ಅಗತ್ಯ – ಶಿರ್ತಾಡಿ ಹಿಂದೂ ಸಂಗಮದಲ್ಲಿ ಹಿಂದೂ ಮುಖಂಡರಿಂದ ಎಚ್ಚರಿಕೆ

BIDIRE NEWS

ಮೂಡುಬಿದಿರೆ : ಸ್ವಾರ್ಥಪರ ಶಕ್ತಿಗಳು ಹಿಂದೂ ಸಮಾಜದೊಳಗಿನ ಜಾತಿಗಳನ್ನು ಒಡೆದು ಹಿಂದೂ ಧರ್ಮವನ್ನು ದುರ್ಬಲಗೊಳಿಸುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿವೆ. ಯುವಜನಾಂಗವನ್ನು ಧರ್ಮದಿಂದ ದೂರವಿಡುವ ಸಂಚು ವ್ಯವಸ್ಥಿತವಾಗಿ ನಡೆಯುತ್ತಿದ್ದು, ಇದನ್ನು ತಡೆಯಲು ಮುಂದಿನ ಪೀಳಿಗೆಗೆ ಸಂಸ್ಕಾರ–ಸಂಸ್ಕೃತಿಯ ಅರಿವು ನೀಡುವುದು ಅತ್ಯಗತ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿಸರ ವಿಭಾಗ ಪ್ರಮುಖ್ ಪುಷ್ಪರಾಜ್ ಕುಂಪಲ ಹೇಳಿದರು.

ಅವರು ಭಾನುವಾರ ಶಿರ್ತಾಡಿ ಅರ್ಜುನಾಪುರ ದೇವಸ್ಥಾನದಲ್ಲಿ ವಾಲ್ಪಾಡಿ, ಶಿರ್ತಾಡಿ ಹಾಗೂ ಮೂಡುಕೊಣಾಜೆ ಗ್ರಾಮಗಳನ್ನು ಒಳಗೊಂಡ ಶಿರ್ತಾಡಿ ಮಂಡಲದ ವತಿಯಿಂದ ಆಯೋಜಿಸಲಾದ ‘ಹಿಂದೂ ಸಂಗಮ’ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿ ಮಾತನಾಡಿದರು.

ಹಿಂದೂ ಧರ್ಮದ ಆಚರಣೆ, ಇತಿಹಾಸ ಹಾಗೂ ಜೀವನ ಮೌಲ್ಯಗಳನ್ನು ಮಕ್ಕಳಿಗೆ ಪರಿಚಯಿಸದೇ ಹೋದರೆ ಸಮಾಜದ ಬೇರು ಕಳಚಿಕೊಳ್ಳುತ್ತದೆ. ಸ್ವದೇಶಿ ಉತ್ಪನ್ನಗಳ ಬಳಕೆ, ಪ್ಲಾಸ್ಟಿಕ್ ಉಪಯೋಗ ಕಡಿತ, ಕುಟುಂಬ ವ್ಯವಸ್ಥೆಯ ರಕ್ಷಣೆ ಹಾಗೂ ನಾಗರಿಕ ಶಿಷ್ಟಾಚಾರ ಪಾಲನೆಯೇ ಸಮಾಜ ಸೇವೆಯ ನಿಜವಾದ ಅರ್ಥವಾಗಿದೆ ಎಂದು ಹೇಳಿದರು.

ಕರಿಂಜೆ ಜಗದ್ಗುರು ರಾಘವೇಂದ್ರ ಪೀಠದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ತನ್ನ ನಾಗರಿಕತೆ ಹಾಗೂ ಇತಿಹಾಸವನ್ನು ಮರೆತ ರಾಷ್ಟ್ರಗಳು ಇತಿಹಾಸದಿಂದಲೇ ಅಳಿದುಹೋಗಿವೆ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ಹಿಂದೂ ಧರ್ಮ ಮತ್ತು ಧಾರ್ಮಿಕ ಕೇಂದ್ರಗಳ ಮೇಲೆ ನಡೆದ ದಾಳಿಗಳು ಸಮಾಜದ ಅಸ್ತಿತ್ವಕ್ಕೆ ಸವಾಲಾಗಿ ಪರಿಣಮಿಸಿವೆ. ಮುಂದಿನ ದಿನಗಳಲ್ಲಿ ಇಂತಹ ಅಪಾಯಗಳನ್ನು ತಡೆಯಲು ಹಿಂದೂ ಬಾಂಧವರು ಜಾತಿ–ಪಂಗಡಗಳನ್ನು ಬದಿಗಿಟ್ಟು ಒಗ್ಗಟ್ಟಾಗಿ ನಿಲ್ಲಬೇಕೆಂದು ಕರೆ ನೀಡಿದರು.

ಶಿರ್ತಾಡಿ ಸತ್ಯಸಾರಮಣಿ ಕ್ಷೇತ್ರದ ಮಾಜಿ ಅಧ್ಯಕ್ಷ ಗೋಪಾಲ ಶಿರ್ತಾಡಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿ ಶಕೀನ, ಪಾಡ್ದನ ಹಾಡುಗಾರ್ತಿ ಗಿರಿಯಮ್ಮ, ಕಾಷ್ಠಶಿಲ್ಪಿ ಪ್ರಭಾಕರ ಆಚಾರ್ಯ, ನಾಟಿ ವೈದ್ಯೆ ಚಂದ್ರಾವತಿ, ಹಿರಿಯರಾದ ಶಶಿಧರ ದೇವಾಡಿಗ ಹಾಗೂ ವಸಂತ ಕುಂದರ್ ಉಪಸ್ಥಿತರಿದ್ದರು.

ರಾಮ್ ಪ್ರಸಾದ್ ಮೂಡುಕೊಣಾಜೆ ಸ್ವಾಗತಿಸಿದರು. ನ್ಯಾಯವಾದಿ ಚಂದ್ರವರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಬಿ. ಅಳಿಯೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಶಿರ್ತಾಡಿಯಿಂದ ಅರ್ಜುನಾಪುರ ಕ್ಷೇತ್ರದವರೆಗೆ ವೈಭವದ ಶೋಭಾಯಾತ್ರೆ ನಡೆಯಿತು. ಸಭೆಗೆ ಮುನ್ನ ಗೋಪೂಜೆ ನೆರವೇರಿತು.


slider