ಮೂಡುಬಿದಿರೆ: ಮದುವೆಗೆ ಮುನ್ನ ನಡೆಯುವ ಮದರಂಗಿ ಆಚರಣೆ ಶಾಸ್ತ್ರಬದ್ಧವಾಗದೇ ಗದ್ದಲ ಆಡಂಬರಕ್ಕೆ ಸೀಮಿತವಾಗುತ್ತಿರುವುದು ದಾಂಪತ್ಯ ಜೀವನದ ಶಾಂತಿಗೆ ಮಾರಕವಾಗುತ್ತಿದೆ ಎಂದು ಕರಿಂಜೆ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಹಿಂದೂ ಸಮಾಜ ಸೇವಾ ಟ್ರಸ್ಟ್ ಹಾಗೂ ಶನಿಪೂಜಾ ಸಮಿತಿ ಪಡು-ಮೂಡುಕೊಣಾಜೆ ಆಶ್ರಯದಲ್ಲಿ ಪಡುಕೊಣಾಜೆಯಲ್ಲಿ ಶನಿವಾರ ರಾತ್ರಿ ನಡೆದ 21ನೇ ಸಾಮೂಹಿಕ ಶ್ರೀ ಶನೈಶ್ಚರ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಸೇವಾಮನೋಭಾವ, ಶಿಸ್ತು ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಸಕಾರಾತ್ಮಕ ಪರಿವರ್ತನೆ ಸಾಧ್ಯ. ಧಾರ್ಮಿಕ ಆಚರಣೆಗಳು ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿರುವುದರಿಂದ ಜನರು ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದರು.
ವಾಗ್ಮಿ ದಾಮೋದರ ಶರ್ಮ ಬಾರ್ಕೂರು ಧಾರ್ಮಿಕ ಉಪನ್ಯಾಸ ನೀಡಿ, ಶ್ರದ್ಧೆ ಹಾಗೂ ಭಕ್ತಿಯಿಂದ ದೇವರ ಸೇವೆ ಮಾಡಿದಾಗ ಅವಶ್ಯಕವಾಗಿ ಫಲ ದೊರೆಯುತ್ತದೆ. ಇಂದಿನ ನಮ್ಮ ಸುಖ, ಶಾಂತ ಜೀವನಕ್ಕೆ ಹಿರಿಯರ ಧಾರ್ಮಿಕ ನಂಬಿಕೆಗಳು, ಸಂಸ್ಕಾರ ಮತ್ತು ನಿಸ್ವಾರ್ಥ ಬದುಕು ಪ್ರಮುಖ ಕಾರಣವಾಗಿದೆ. ಹೆತ್ತವರ ಮಾತು ಕೇಳಿ ಸತ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಭಕ್ತಿ ಎಂದರು.
ಉದ್ಯಮಿ ತಿಮ್ಮಯ್ಯ ಶೆಟ್ಟಿ ಪ್ರಾಯೋಕತ್ವದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಪೂಜಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಬಿ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದರು. ಸುಕೇಶ್ ಶೆಟ್ಟಿ ಎದಮೇರು ಮತ್ತಿತರರು ಉಪಸ್ಥಿತರಿದ್ದರು. ಆನಂದ ಕಂಚರ್ಲಗುಡ್ಡೆ ಸ್ವಾಗತಿಸಿದರು. ರಾಮ್‌ಪ್ರಸಾದ್ ನಿರೂಪಿಸಿ ಕಿರಣ್ ಕುಮಾರ್ ವಂದಿಸಿದರು.
ಉಮಾಶಂಕರ್ ಭಟ್ ಪೌರೋಹಿತ್ಯದಲ್ಲಿ ಸಾಮೂಹಿಕ ಶನೈಶ್ಚರ ಪೂಜೆ ನಡೆಯಿತು.

